ಚಿಕ್ಕಮಗಳೂರು ಮಲೆನಾಡು ವಿದ್ಯಾ ಸಂಸ್ಥೆಯ ಶ್ರೀಮತಿ ಪರ್ವತವರ್ಧನ ಎಂ.ಎಲ್ ವಾಸುದೇವಮೂರ್ತಿ ಪ್ರೌಢಶಾಲೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ತಹಸೀಲ್ದಾರ್ ರೇಷ್ಮಾ ಉದ್ಘಾಟಿಸಿದರು. ಡಾ.ಡಿ.ಎಲ್.ವಿಜಯಕುಮಾರ್, ಜಿ.ಬಿ.ಸುರೇಶ್, ಶಂಕರನಾರಾಯಣ ಭಟ್ ಮತ್ತಿತರರಿದ್ದರು.  
ಜಿಲ್ಲೆ

ನಾಯಕತ್ವ ಗುಣ ಬೆಳೆಸಲು ವಿದ್ಯಾರ್ಥಿ ಸಂಘಗಳು ಸಹಕಾರಿ

ಚಿಕ್ಕಮಗಳೂರು: ಮಕ್ಕಳು ಮತ್ತು ಯುವಜನತೆಯಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದು ತಹಸೀಲ್ದಾರ್ ಕೆ.ಎಸ್. ರೇಷ್ಮ ತಿಳಿಸಿದರು.

ನಗರದ ಮಲೆನಾಡು ವಿದ್ಯಾ ಸಂಸ್ಥೆಯ ಶ್ರೀಮತಿ ಪರ್ವತವರ್ಧನ ಎಂ.ಎಲ್ ವಾಸುದೇವಮೂರ್ತಿ ಪ್ರೌಢಶಾಲೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯರಾಗುವುದರಿಂದ ಶಿಸ್ತು ಮತ್ತು ನಾಯಕತ್ವ ಗುಣಗಳು ಬೆಳೆಯುತ್ತವೆ. ಅದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.

ಬಹಳಷ್ಟು ವರ್ಷಗಳ ಹಿಂದೆ ಸಾಕಷ್ಟು ಜನರಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ಹತ್ತಾರು ಮೈಲಿಯಷ್ಟು ದೂರ ನಡೆದು ಅವರಿವರ ಮನೆಯಲ್ಲಿ ವಾರಾನ್ನದ ಊಟ ಮಾಡಿ ಓದಬೇಕಾಗಿತ್ತು, ಅಂದು ವಿದ್ಯಾಭ್ಯಾಸಕ್ಕೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಎಲ್ಲ ರೀತಿಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸುತ್ತಿವೆ. ವಿದ್ಯಾರ್ಥಿಗಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ವಿಯಾಗಬೇಕಾದರೆ ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕು. ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಏಳಬೇಕು. ತಪ್ಪದೇ ಹೋಂವರ್ಕ್ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ಗೈರಾಗಬಾರದು. ಹೆಚ್ಚಿನ ಅಂಕ ಗಳಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಬಿ. ಸುರೇಶ್, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು. ವಿದ್ಯಾರ್ಥಿ ಸಂಘಗಳ ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಳೆದ ೧೭ ವರ್ಷಗಳಿಂದ ಸತತವಾಗಿ ಕ್ರೀಡಾಕೂಟಗಳಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮುತ್ತಿರುವ ವಿದ್ಯಾರ್ಥಿಗಳನ್ನು ಮತ್ತು ಎನ್‌ಸಿಸಿಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಇದೇ ವೇಳೆ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ ಜೆ.ಪಿ. ಕೃಷ್ಣೇಗೌಡ ಮತ್ತು ಆಶ್ರಯ ಫೌಂಡೇಶನ್ ನಿಂದ ತಲಾ ಒಂದು ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಎರಡು ಕಂಪ್ಯೂಟರ್‌ಗಳನ್ನು ಸಂಸ್ಥೆಗೆ ನೀಡಲಾಯಿತು.

ಮಲೆನಾಡು ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಶಂಕರನಾರಾಯಣ ಭಟ್, ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷೆ ಜಯಶ್ರೀ ಜೋಶಿ ಮಾತನಾಡಿದರು, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎನ್. ಮಂಜುನಾಥ ಭಟ್, ಕಚೇರಿ ಕಾರ್ಯದರ್ಶಿ ಶ್ರೀಲಕ್ಷಿö್ಮÃ, ಶಿಕ್ಷಕರಾದ ಎನ್.ರೂಪ, ಬಿ. ಆರ್.ಶೋಭಾ ಪ್ರಭು ಉಪಸ್ಥಿತರಿದ್ದರು.