ಬಸವಕಲ್ಯಾಣ: ನಿರಗುಡಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಶನಿವಾರ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದವರೂ ಸೇರಿ ವಿಶೇಷ ಸಭೆಗೆ ಯಾವೊಬ್ಬ ಸದಸ್ಯ ಬಾರದ್ದರಿಂದ ಪ್ರಕ್ರಿಯೆ ಮುಂದೂಡಲಾಯಿತು.
೧೬ ಸದಸ್ಯ ಬಲದ ಗ್ರಾಪಂ ಅಧ್ಯಕ್ಷ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಮೀಸಲಿದೆ. ಅಧ್ಯಕ್ಷ ಸ್ಥಾನಕ್ಕೆ ಜಗದೇವಿ ಚಂದ್ರಪ್ಪ ಹಾಗೂ ಸಂಧ್ಯಾ ಶಿವರಾಜ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ವಿನಂತಾ ಕಾಂಬಳೆ ಒಬ್ಬರೇ ಉಮೇದುವಾರಿಕೆ ದಾಖಲಿಸಿದ್ದರು.
ನಂತರ ಆಯ್ಕೆ ಸಂಬAಧ ನಡೆಯಬೇಕಾದ ವಿಶೇಷ ಸಭೆಗೆ ಸದಸ್ಯರು ಗೈರಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿದ್ದು, ಜು.೩೧ರಂದು ನಿಗದಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಮಾರ್ಥಂಡ ಮಚಕುರಿ ಪ್ರಕಟಿಸಿದರು.
ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ೧ಕ್ಕೆ ಚುನಾವಣಾ ವಿಶೇಷ ಸಭೆ, ೧ರಿಂದ ೧.೨೦ರವರೆಗೆ ನಾಮಪತ್ರ ಪರಿಶೀಲನೆಗೆ ಸಮಯ ನಿಗದಿಪಡಿಸಲಾಗಿತ್ತು. ನಂತರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಸಮಯ ಮೀರಿದರೂ ಸದಸ್ಯರು ಬರದಿರುವುದರಿಂದ ಪ್ರಕ್ರಿಯೆ ಮುಂದೂಡಲಾಯಿತು. ಪಿಡಿಒ ಗಿರೀಶ, ಕೃಷಿ ಅಧಿಕಾರಿ ಶ್ರೀಶೈಲ ಇತರರಿದ್ದರು.