ಜಿಲ್ಲೆ

ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್

ಹಾಸನ: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಸೋಮವಾರ ಗೃಹಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಬಿ.ಶಿವರಾಮು ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎರಡು ಸೇಟ್ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮಧ್ಯಾಹ್ನ 1.39ಕ್ಕೆ ಸಲ್ಲಿಸಿದರು.
ಶ್ರೇಯಸ್ ಪಟೇಲ್ ಅವರು ಸೋಮವಾರ 4 ಸೆಟ್ ನಾಮಪತ್ರಗಳನ್ನು ಸಲ್ಲಿಸಲು ನಿರ್ಧರಿಸಲಾಗಿತ್ತು. ಡಿ.ಕೆ. ಶಿವಕುಮಾರ್ ಬಂದ ಆಗಮಿಸುವುದು ತಡವಾಗುವ ಹಿನ್ನಲೆಯಲ್ಲಿ ಅವರು ಬಂದಾಗ ಮತ್ತೆ ಎರಡು ಸೆಟ್ ನಾಮಪತ್ರ ಸಲ್ಲಿಸೋಣ. ಈಗ ಎರಡು ಸೆಟ್ ನಾಮಪತ್ರ ಸಲ್ಲಿಸಲು ನಿರ್ಧರಿಸಿ, ಅದರಂತೆ ಎರಡು ಸೆಟ್ ನಾಮಪತ್ರ ಸಲ್ಲಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯದಿಂದ ತಡವಾಗಿ ಆಗಮಿಸಿದ ಹಿನ್ನಲೆಯಲ್ಲಿ ಸಮಯ ಮುಗಿದ ಕಾರಣ ಮತ್ತೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.
ಉಮೇದುವಾರಿಕೆ ಸಲ್ಲಿಸಿದ ನಂತರ ಡೇರಿ ವೃತ್ತದಿಂದ ಬೃಹತ್ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ಸಾಗಿತು. ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಅಭ್ಯರ್ಥಿ ಶ್ರೇಯಸ್ ಪಟೇಲ್, ಮುಖಂಡ ಬಿ.ಶಿವರಾಂ, ಎಂ.ಎ.ಗೋಪಾಲಸ್ವಾಮಿ, ಎಚ್.ಕೆ.ಮಹೇಶ್, ಬನವಾಸೆ ರಂಗಸ್ವಾಮಿ, ಮುರಳಿ ಮೋಹನ್, ಶ್ರೀಧರ್‌ಗೌಡ, ಅನುಪಮಾ ಮಹೇಶ್ ಸೇರಿದಂತೆ ಇತರರು ಇದ್ದರು. ಮೆರವಣಿಗೆಯಲ್ಲಿ ಸೇರಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.

ಬಿಸಿಲಿನ ತಾಪಕ್ಕೆ ಹೈರಾಣದ ಜನರು:
ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನರು ಆಗಮಿಸಿದ್ದರು ಈ ಸಂದರ್ಭದಲ್ಲಿ ಬಿಸಿಲಿನ ತಾಪ ತಡೆಯಲಾರದೆ ಜನರು ನೆರಳನ್ನ ಆಶ್ರಯಿಸಲು ಪರದಾಡಬೇಕಾಯಿತು. ಮಹಿಳೆಯರು ಮತ್ತು ಪುರುಷರು ಬಿಸಿಲಿನ ತಾಪ ತಾಳಲಾರದೆ ಕೆಲವರು ಬಂದಂತಹವರು ವಾಪಸ್ ತೆರಳಿದರು. ಇದಲ್ಲದೆ ಬಿಸಿಲಿನ ತಾಪ ತಾಳಲಾರದೆ ಜನರು ಕಲ್ಲಂಗಡಿ ಹಣ್ಣು ನೀರು ಹಾಗೂ ಐಸ್ ಕ್ರೀಮ್‌ಗಳನ್ನ ಕೊಂಡುಕೊಳ್ಳಲು ಮುಗಿ ಬೀಳುತ್ತಿದ್ದರು.

ಮದ್ಯದಂಗಡಿ, ಹೋಟೆಲ್‌ಗೆ ಭರ್ಜರಿ ವ್ಯಾಪಾರ:
ಶ್ರೇಯಸ್ ನಾಮಪತ್ರ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು ಆಗಮಿಸಿದ್ದರು ಈ ಸಂದರ್ಭದಲ್ಲಿ ಎಂಜಿ ರಸ್ತೆ, ರಿಂಗ್ ರಸ್ತೆಯಲ್ಲಿ ಇರುವಂತಹ ಮದ್ಯದ ಹೋಟಲ್ ಹಾಗೂ ಮಾಂಸದ ಅಂಗಡಿಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಎರಡು ಅಂಗಡಿಗಳಿಗೆ ಹೆಚ್ಚಿನ ವ್ಯಾಪಾರ ನಡೆಯಿತು, ಇದಲ್ಲದೆ ಕಲ್ಲಂಗಡಿ, ಜ್ಯೂಸ್, ಎಳನೀರು, ಸೌತೆಕಾಯಿಗೆ ಭಾರಿ ಬೇಡಿಕೆ ಹೆಚ್ಚಾಗಿತ್ತು.

ಟ್ರಾಫಿಕ್ ಜಾಮ್:
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಗರದ ಡೇರಿ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ಮೆರವಣಿಗೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಬಿ.ಎಂ. ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ನಗರದ ಬಹುತೇಕ ಕಡೆ ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವಂತಾಯಿತು.

ಸೇಬಿಗಾಗಿ ಮುಗಿಬಿದ್ದ ಜನರು:
ಡಿ.ಕೆ. ಶಿವಕುಮಾರ್ ಅವರಿಗೆ ಹಾಕಲೆಂದು ತಯಾರಿಸಲಾಗಿದ್ದ ಬೃಹತ್ ಸೇಬಿನ ಹಾರವನ್ನು ತರಿಸಲಾಗಿತ್ತು. ಡಿಕೆಶಿ ಅವರಿಗೆ ಕ್ರೇನ್ ಮೂಲಕ ಸೇಬಿನ ಹಾರ ಹಾಕಿದ ಬಳಿಕ ಹಾರ ಇಳಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಸೇಬಿಗಾಗಿ ಮುಗಿಬಿದ್ದ ಘಟನೆಯೂ ನಡೆಯಿತು.