ವಿಜಯಪುರ: ಚೆಕಪೋಸ್ಟ್ ಇದ್ರೂ ತಪಾಸಣೆ ಮಾಡಲು ಸಿಬ್ಬಂದಿಗಳೇ ಇಲ್ಲವಾಗಿದ್ದು, ಗಡಿ ಭಾಗದಲ್ಲಿ ಕೇವಲ ನಾಮಕಾವಾಸ್ತೆ ಎಂಬಂತಾಗಿದೆ ಉಮರಾಣಿ ಚೆಕಪೋಸ್ಟ್. ದಿಗ್ವಿಜಯ ನ್ಯೂಸ್/ ವಿಜಯವಾಣಿ ರಿಯಾಲಿಟಿ ಚೆಕ್ ನಲ್ಲಿ ಬಟಾ ಬಯಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿ ಬಾಗಿಲು ಹಾಕಿದ ಚೆಕ್ ಪೋಸ್ಟ್ ನಿಂದಾಗಿ ಯಾರು ಬೇಕಾದ್ರೂ ಸರಳವಾಗಿ ಒಳ ಬರಬಹುದಾಗಿದೆ. ಉಮರಾಣಿ ಚೆಕ್ ಪೋಸ್ಟ್ ನಲ್ಲಿ ಇರಬೇಕಾದ ಅಧಿಕಾರಿಗಳು ಅದೆಲ್ಲಿ ನಾಪತ್ತೆಯಾಗಿದ್ದಾರೋ ಗೊತ್ತಿಲ್ಲ. ನೆರೆಯ ಮಹಾರಾಷ್ಟ್ರದಿಂದ ಎಗ್ಗಿಲ್ಲದೆ ನುಗ್ಗುತ್ತಿರುವ ವಾಹನಗಳು, ಕರೋನಾ ಆತಂಕವನ್ನು ಸೃಷ್ಠಿಸಿವೆ. ಉಮರಾಣಿಯಲ್ಲಿ ಚೆಕ್ ಪೋಸ್ಟ್ ಇದೆ, ಆದರೆ ಅಧಿಕಾರಿಗಳೇ ಇಲ್ಲವಾಗಿದ್ದರಿಂದ ಖಾಲಿ ಖಾಲಿ ಚೆಕ್ ಪೋಸ್ಟ್ ಮುಂದೆ ನೂರಾರು ವಾಹನಗಳ ಬಿಂದಾಸ್ ಓಡಾಟ ಮಾಡುತ್ತಿವೆ. ಹೇಳೋರಿಲ್ಲ, ಕೇಳೋರಿಲ್ಲದಂತಾಗಿದ್ದು ಇಲ್ಲಿ ಯಾರು ಬೇಕಾದ್ರೂ ಕರ್ನಾಟಕದ ಗಡಿಯೊಳಗೆ ಬರಬಹುದು. ಯಾವುದೇ ತಪಾಸಣೆಯೂ ಇಲ್ಲ, ಚೆಕಿಂಗ್ ನೂ ಇಲ್ಲವಾಗಿದ್ದು, ಗಡಿ ಚೆಕ್ ಪೋಸ್ಟ್ ನಲ್ಲಿನ ನೈಜ್ ಸ್ಥಿತಿಯನ್ನು ನಿಮ್ಮ ದಿಗ್ವಿಜಯ ನ್ಯೂಸ್/ ವಿಜಯವಾಣಿ ಬಿಚ್ಚಿಟ್ಟಿವೆ. ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಿಎಂ ಆದೇಶಿಸಿದ್ರೂ ಯಾರೊಬ್ಬರೂ ಇಲ್ಲದಂತಾಗಿದ್ದು, ಸರ್ಕಾರದ ಆದೇಶಕ್ಕೂ ಇಲ್ಲಿ ಕಿಮ್ಮತ್ತು ಇಲ್ಲವಾ ಎಂಬಂತಾಗಿದೆ. ಇನ್ನು ಬಾಗಿಲು ಮುಚ್ಚಿದ ಚೆಕ್ ಪೋಸ್ಟ್ ತೆರೆದು ಒಳಗೆ ನೋಡಿದ್ರೆ ಒಂದೆರಡು ಪೊಲೀಸರ ಶರ್ಟ್ ಗಳು ನೇತಾಕಿದ್ದು ಕಾಣುತ್ತದೆ. ಮತ್ತೊಂದೆಡೆ ಮೂಲೆಯಲ್ಲಿ ಆರ್ ಟಿ ಪಿ ಸಿ ಆರ್ ತಪಾಸಣೆ ನಡೆಸುವ ಮೆಡಿಕಲ್ ಸಾಮಗ್ರಿಗಳು ಸಹ ಧೂಳು ತಿನ್ನುತ್ತ ಬಿದ್ದಿದ್ದು, ಸಂಪೂರ್ಣವಾಗಿ ಹಾಳಾಗಿವೆ. ಇದೆಲ್ಲದರ ಸ್ಥಿತಿ ನೋಡಿದ್ರೆ ಇದು ಕೇವಲ ಹೆಸರಿಗೆ ಮಾತ್ರ ಇದೆಯಾ ಎಂಬ ಸಂಶಯ ಕಾಡತೊಡಗಿದೆ. ಸಂಭಂದಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಉಮರಾಣಿಯ ಗಡಿ ಭಾಗದಿಂದ ಒಳ ನುಸುಳುವ ಅನ್ಯ ರಾಜ್ಯದ ಜನ್ರ ತಪಾಸಣೆಗೆ ಮುಂದಾಗಬೇಕಿದೆ.