ನಾಪೋಕ್ಲು: ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾಮರಿಯಮ್ಮ ಅವರ ಜನ್ಮದಿನವನ್ನು ಭಾನುವಾರ ಇಲ್ಲಿನ ಮೇರಿ ಮಾತೆ ದೇವಾಲಯದಲ್ಲಿ ಕ್ರೈಸ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.
ಮಾತೆ ಮರಿಯಮ್ಮ ಅವರ ಜಯಂತಿ ಪ್ರಯುಕ್ತ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಅವರು ವಿಶೇಷ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ, ಮೇರಿ ಮಾತೆಯ ಆದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತ ಜೀವನ ನಡೆಸಬೇಕು ಎಂದು ಹೇಳಿದರು.
ದೇವಾಲಯದಲ್ಲಿ ನಡೆದ ಪ್ರಾರ್ಥನೆಯಲ್ಲಿ ಕ್ರೈಸ್ತರು ಭಾಗವಹಿಸಿ ತಂದ ಹೂಗಳನ್ನು ವಿಶೇಷವಾಗಿ ಅಲಂಕರಿಸಿ ಇರಿಸಲಾದ ಮರಿಯಮ್ಮ ನವರ ಪ್ರತಿರೂಪಕ್ಕೆ ಸಮರ್ಪಿಸಿ ಧನ್ಯರಾದರು. ಈ ಹಬ್ಬಕ್ಕೆ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೋವೇನಾ ಪ್ರಾರ್ಥನೆ ಆಯೋಜಿಸಲಾಗಿತ್ತು. ಈ ಸಂದರ್ಭ ಮೇರಿ ಮಾತೆ ದೇವಾಲಯದ ವ್ಯಾಪ್ತಿಯ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.