ಜಿಲ್ಲೆ

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಗಾಳಿ, ಮಳೆ

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದ್ದು ನದಿ, ತೋಡುಗಳು ತುಂಬಿ ಹರಿಯುತ್ತಿವೆ.

ಮಂಗಳವಾರ ಬಿರುಸಿನ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿ ಜನಜೀವನ ಅಸ್ತವ್ಯಸ್ತಗೊಂಡಿತು. ರಭಸದ ಗಾಳಿಯಿಂದ ಹಲವೆಡೆ ಮನೆ, ಶೆಡ್‌ಗಳಿಗೆ ಹಾನಿಯಾಗಿದೆ. ಮನೆಗಳು ಶೀಟ್‌ಗಳು ಹಾರಿಹೋಗಿ ನಷ್ಟ ಸಂಭವಿಸಿದೆ.

ಕರಡ ಗ್ರಾಮದ ಟಿ.ಡಿ.ಚಿಣ್ಣಪ್ಪ ಎಂಬವರ ವಾಸದ ಮನೆಯ ಪಕ್ಕದಲ್ಲಿದ್ದ ಶೌಚಗೃಹ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಳಕೇರಿ ಗ್ರಾಮದ ತಟ್ಟಂಡ ವಿಮಲಾ ಅವರ ವಾಸದ ಮನೆಯ ಛಾವಣಿ ಮಳೆಯಿಂದ ಹಾನಿಯಾಗಿದೆ. ಬಾವಲಿ ಗ್ರಾಮದ ಪಾಂಡಾಂಡ ಕುಟುಂಬಸ್ಥರ ಐನ್ ಮನೆಗೆ ಕುಸಿದು ಬಿದ್ದು ಪೂರ್ಣ ಹಾನಿಯಾಗಿರುತ್ತದೆ. ಐನ್ ಮನೆಯಲ್ಲಿ ಯಾರೂ ವಾಸ ಇಲ್ಲದೇ ಇದ್ದುದರಿಂದ ಸಮಸ್ಯೆ ಉಂಟಾಗಿಲ್ಲ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾಮಲೆಕ್ಕಿಗರು, ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಎರಡು ದಿನಗಳಿಂದ ಬಿರುಸುಗೊಂಡ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಗದ್ದೆ, ತೋಟಗಳು ಮುಳುಗಡೆಯಾಗಿ ಸಮಸ್ಯೆ ಎದುರಾಗಿದೆ.

ಇಲ್ಲಿಗೆ ಸಮೀಪದ ಕಾವೇರಿ ನದಿ ಪಾತ್ರದಲ್ಲಿರುವ ಚೆರಿಯ ಪರಂಬುವಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದಾಗಿ ಕಂದಾಯ ಇಲಾಖೆಯ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.