ಕೊಡಗು : ಎಲ್ಲರೂ ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಮಡಿಕೇರಿ ವಸ್ತುಸಂಗ್ರಹಾಲಯದ ಮೇಲ್ವಿಚಾರಕಿ ಬಿ.ಪಿ.ರೇಖಾ ಸಲಹೆ ನೀಡಿದರು.
ನಾಪೋಕ್ಲುವಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಪರಂಪರೆ ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪರಂಪರೆ ಅನಾದಿ ಕಾಲದಿಂದಲೂ ಕೂಡಿಕೊಂಡು ಬಂದಿರುತ್ತದೆ. ಭಾರತದಲ್ಲಿ ನಡೆದ ಐತಿಹಾಸಿಕ ಘಟನೆಗಳ ಹಿನ್ನೆಲೆ ಮತ್ತು ಮಹಾನ್ ಪುರುಷರ ಅಚಾರ ವಿಚಾರಗಳು, ಸಿದ್ಧಾಂತ ಮತ್ತು ಸಂಸ್ಕೃತಿ ತಿಳಿಯುವುದು ಅತ್ಯಂತ ಅವಶ್ಯ ಎಂದು ಹೇಳಿದರು.
ಪ್ರಾಚೀನ ಮತ್ತು ಪ್ರಚಲಿತ ನಾಣ್ಯಗಳ ಹಾಗೂ ನೋಟುಗಳ ಸಂಗ್ರಹಕಾರ ಕೆ.ಪಿ. ಕೇಶವಮೂರ್ತಿ ಮಾತನಾಡಿ, ನಾಣ್ಯಗಳು ನಮ್ಮ ದೇಶವನ್ನು ಅಳಿದ ರಾಜ ಮನೆತನದ ವೈಭವಕ್ಕೆ ಸಾಕ್ಷಿಯಾಗಿದೆ. ಎಷ್ಟೋ ಇತಿಹಾಸಿಕ ಕುರುಹು ಹುಡುಕುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಇತಿಹಾಸವನ್ನು ನಾಣ್ಯಗಳ ಸಂಗ್ರಹ ರೂಪದಲ್ಲಿ ಇಂದಿನ ಪೀಳಿಗೆಗೆ ತಿಳಿಸುತ್ತಿರುವುದು ನನ್ನ ಸೌಭಾಗ್ಯ. ಪ್ರತಿ ವಿದ್ಯಾರ್ಥಿ ಇತಿಹಾಸ ತಿಳಿದುಕೊಳ್ಳಬೇಕು. ಆಗ ಮಾತ್ರ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಲು ಸಾಧ್ಯ ಎಂದು ಪ್ರಾಂಶುಪಾಲ ಡಾ.ಎನ್.ಪಿ ಕಾವೇರಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇತಿಹಾಸ ವಿಭಾಗ ಮುಖ್ಯಸ್ಥ ಟಿ.ಎಲ್ ತ್ಯಾಗರಾಜು, ಐಕ್ಯೂಎಎಸ್ ಸಂಯೋಜಕ ಎಚ್. ಎಸ್.ನಂದೀಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಏರ್ಪಡಿಸಿದ್ದರು.