ಜಿಲ್ಲೆ

ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ

ಮುಳಬಾಗಿಲು: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ತಾಲೂಕಿನ ದುಗ್ಗಸಂದ್ರ ಹೋಬಳಿ ವ್ಯಾಪ್ತಿಯ ಅಗರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆೆ. ಬುಧವಾರ ಬೆಳಗ್ಗೆ ಅರಣ್ಯದಲ್ಲಿ ಗಸ್ತು ಮಾಡುತ್ತಿದ್ದ ಅರಣ್ಯ ರಕ್ಷಕರಿಗೆ ಮಹಿಳೆಯ ಅಸ್ಥಿಪಂಜರ ಕಾಣಿಸಿದ್ದು, ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರ್​ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ತಾಲೂಕಿನ ಅಗರ ಗ್ರಾಮದ ನಾರಾಯಣಸ್ವಾಮಿ, ಶಾರದಾ ದಂಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಆ.8ರಂದು ಶಾರದಾ(36) ನಾಪತ್ತೆಯಾಗಿದ್ದಳು. ಗಂಡ ನಾರಾಯಣಸ್ವಾಮಿ ಪತ್ನಿಯನ್ನು ಹುಡುಕಾಡಿ ಸುಳಿವು ಸಿಕ್ಕದ ಕಾರಣ, ಆ.13ರಂದು ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಅಗರ ಗ್ರಾಮದ ಗಾರೆ ಮೇಸ್ತ್ರಿ ವೆಂಕಟರಾಮ್​ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪೊಲೀಸರು ಕರೆದು ವಿಚಾರಣೆ ನಡೆಸಿದ್ದರು. ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದೆ.

ಬುಧವಾರ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮಹಿಳೆಯ ಉದ್ದನೆಯ ತಲೆ ಕೂದಲು, ಧರಿಸಿದ್ದ ಚೂಡಿದಾರ್​, ಬಟ್ಟೆ, ಚಪ್ಪಲಿ, ತಾಳಿ, ಕಾಲುಂಗುರ, ಮೂಗುತಿ, ಹಾಗೂ ಮೊಬೈಲ್​ ಪತ್ನಿ ಶಾರದಾ ಅವರದ್ದೇ ಎಂದು ನಾರಾಯಣಸ್ವಾಮಿ ಮತ್ತು ಕುಟುಂಬದವರು ಗುರುತಿಸಿದ್ದು, ಈಕೆಯನ್ನು ಗಾರೆ ಮೇಸ್ತ್ರಿ ವೆಂಕಟರಾಮ್​ ಮತ್ತು ಮೂವರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ ಈಗ ಮತ್ತೊಂದು ದೂರನ್ನು ನೀಡಿದ್ದಾರೆ. ಮಹಿಳೆಯ ಮೇಲೆ ಅರಣ್ಯದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯೇ ಅಥವಾ ಬರಿ ಕೊಲೆ ಮಾಡಲಾಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.