ಜಿಲ್ಲೆ

ನಾನೇ ನಿರ್ದೇಶಕ, ನಾನೇ ಹೀರೋ

Kolar

ಕೋಲಾರ: ಮುಳಬಾಗಿಲು ಕ್ಷೇತ್ರದಲ್ಲಿ ಪಿಚ್ಚರ್ ಇನ್ನು ಬಾಕಿ ಇದೆ, ಇನ್ಮುಂದೆ ನಾನೇ ನಿರ್ದೇಶಕ, ನಾನೇ ನಿರ್ಮಾಪಕ, ನಾನೇ ಹೀರೋ ಎಂದು ಸಚಿವ ಎಚ್.ನಾಗೇಶ್ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಂಸದ ಎಸ್.ಮುನಿಸ್ವಾಮಿಗೆ ಟಾಂಗ್ ನೀಡಿದ್ದಾರೆ.=

ನಗರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮುಳಬಾಗಿಲು ನಗರಸಭೆ ಚುನಾವಣೆ ಸಂದರ್ಭದಲ್ಲಿ ಮುಖಂಡರೆನಿಸಿಕೊಂಡವರು ಸಾಮಾನ್ಯ ಕಾರ್ಯಕರ್ತನಿಗಿಂತ ಕೀಳಾಗಿ ನಡೆದುಕೊಂಡಿದ್ದು ಅವರಿಗೆ ಶೋಭೆ ತರುವುದಿಲ್ಲ. ಇನ್ನೂ ಕೆಲವರು ನನಗೆ ಚಾಲೆಂಜ್ ಮಾಡಿದ್ರು, ನನಗೆ ಸದಸ್ಯರಿಲ್ಲವೆಂದು ಯೂಟ್ಯೂಬ್‌ಗಳಲ್ಲಿ ವಿಡಿಯೋ ಹರಿಬಿಟ್ಟರು. ಕೊನೆಗೆ ಚುನಾವಣೆಯಲ್ಲಿ ಏನಾಯಿತೆಂದು ನಿಮಗೇ ತಿಳಿದಿದೆ, ಉಪೇಂದ್ರ ಅವರ ಎ ಸಿನಿಮಾದಂತೆ ಆಗಿದೆ ಎಂದರು.

ತಾಲೂಕಿನಲ್ಲಿ ಬೇರೆಯವರಿಗೆ ಚುಕ್ಕಾಣಿ ನೀಡಿ ವ್ಯವಸ್ಥೆ ಕೆಟ್ಟುಹೋಗಿದೆ, ನೀವು ಬಂದು ಸರಿ ಮಾಡಿದ್ದೀರಿ, ಮತ್ತೆ ಹಿಂದಕ್ಕೆ ಹೋಗಬಾರದೆಂದು ಕ್ಷೇತ್ರದ ಎಲ್ಲ ಮುಖಂಡರು ನನಗೆ ಸಾಥ್ ನೀಡಿದ್ದು, ನನ್ನ ಬೆಂಬಲಿಗ ಅಭ್ಯರ್ಥಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಜೆಡಿಎಸ್‌ಗೆ 18 ಸದಸ್ಯರ ಬೆಂಬಲಕ್ಕೆ ನಾನು 7 ಸದಸ್ಯರನ್ನು ನೀಡಿದ್ದೇನೆ. ಎದುರಾಳಿ ಬೇರೆ ರೀತಿ ಹೊಂದಾಣಿಕೆ ಮಾಡಿಕೊಂಡು ಬಂದಿದ್ದರು. ನಾನು ಈ ಹೊಂದಾಣಿಕೆ ಮಾಡಿಕೊಂಡು ಗೆಲುವು ಸಾಧಿಸಿದ್ದೇನೆ. ನಿನ್ನೆ ಯಾರ‌್ಯಾರ ಯೋಗ್ಯತೆ ಏನು, ಬಣ್ಣ, ಗುಣ, ವರ್ತನೆ ಏನು ಎಂದು ಗೊತ್ತಾಗಿದೆ ಎಂದು ಛೇಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಗೆದ್ದೆ, ನಾನೇನೂ ಮಗು ಅಲ್ಲ, ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ಅವರು (ಕೊತ್ತೂರು ಮಂಜುನಾಥ್) ನನ್ನನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದರೆಂದು ಎರಡು ವರ್ಷ ಬಿಟ್ಟೆ, ನನಗೆ ಏನೂ ಹೇಳಲ್ಲ, ಸಭೆ, ಸಮಿತಿ ಅವರೇ ಮಾಡೋದು, ಶಾಸಕರಾಗಿ ನಿಮ್ಮ ರೋಲ್ ಇಲ್ವಾ ಎಂದು ಜನ ಕೇಳ್ತಿದ್ರು, ಸಚಿವನಾದ ಮೇಲೂ ಹಾಗೇ ಮಾಡಿದ್ರು, ನನಗೆ ಸಹಿಸೋಕೆ ಆಗಲಿಲ್ಲ. ಮಕ್ಕಳನ್ನು ಬೆಳೆಸುವಾಗ ಹಾಲು ನೀಡಬೇಕು ನಿಜ. ಆದರೆ ಕೊನೆಯವರೆಗೂ ಹಾಲು ಕುಡಿಸಿಕೊಂಡೇ ತೊಂದರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರೊಡಕ್ಷನ್, ಡೈರೆಕ್ಷನ್ ನಂದೇ: ನಾನು ಪಕ್ಷೇತರ ಶಾಸಕ. ನನಗೆ ಯಾರೂ ವಿರೋಧಿಗಳಿಲ್ಲ. ಇರುವ ನಾಲ್ಕೈದು ಮಂದಿಯನ್ನು ದೂರ ಇಟ್ಟಿದ್ದೇನೆ. ಈಗಲೂ ನನ್ನ ಬಳಿ ಬಂದರೆ ಕೆಲಸ ಮಾಡಿಕೊಡುವೆ. ಬರದಿದ್ದರೆ ನಾನೇನು ಮಾಡಲಿ? ನನಗೂ ಆಟ ಆಡೋದಕ್ಕೆ ಬರುತ್ತದೆ. ಕಾಲೇಜಿನಲ್ಲೇ ಯೂನಿಯನ್ ಲೀಡರ್ ಆಗಿದ್ದ ನನಗೆ ರಾಜಕೀಯ ಗೊತ್ತಿಲ್ಲವೇ? ಹಳೇ ತಂತ್ರಗಾರಿಕೆ ಉಪಯೋಗಿಸುತ್ತಿದ್ದೇನೆ. ಐಎಎಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ನನಗೆ ಮಾರ್ಗದರ್ಶಕರಿಲ್ಲ. ಬದಲಿಗೆ ನಂದೇ ಪ್ರೊಡಕ್ಷನ್, ನಂದೇ ಡೈರೆಕ್ಷನ್ ಎಂದರು.

ಸಂಸದರಿಗೂ ವರ್ಷ: ಮಂತ್ರಿಯಾಗಿ ನನಗೆ ಸ್ಥಾನಮಾನ ಇದೆ. ನಾವೇನು ಬಿಟ್ಟಿ ಬಿದ್ದಿದ್ದೀವಾ? ಸಂಸದರು ಹಿಂದಿದ್ದ ಮಂತ್ರಿಗಳನ್ನು ಹೀಗೆಯೇ ಅನ್ನುತ್ತಿದ್ದರಾ? ಮುನಿಸ್ವಾಮಿ ನನಗೆ ಸಂಬಂಧಿಕರು, ಸಹೋದರರು, ಚಿಕ್ಕವರು, ಅದಕ್ಕಾಗಿ ಕ್ಷಮಿಸಿಕೊಂಡು ಹೋಗುತ್ತಿದ್ದೇವೆ. ಇವರಿಗೂ ಒಂದು ವರ್ಷ ನೀಡಿದ್ದೇನೆ. ಇನ್ನೂ ಸ್ವಲ್ಪ ದಿನ ಬಿಟ್ಟು ನೋಡಿ ಮತ್ತೆ ನನ್ನದೇ ಆಟ ಶುರು ಮಾಡ್ತೀನಿ ಎಂದು ನಾಗೇಶ್ ನುಡಿದರು.