ಜಿಲ್ಲೆ

ನಾನು ಸಂತೆಯಲ್ಲಿ ತಪ್ಪಿಸಿಕೊಂಡ ಮಗ!

ಯಾರು ಕೈಹಿಡಿಯುತ್ತಾರೋ ಅವರ ಕೈ ಹಿಡಿದು ಮನೆ ಸೇರುತ್ತೇನೆ ಎಂದ ಮಾಧುಸ್ವಾಮಿ

ತುಮಕೂರು: "ಸಂತೆಯಲ್ಲಿ ತಪ್ಪಿಸಿಕೊಂಡಿರುವ ಮಗ ನಾನು, ಯಾರು ಕೈಹಿಡಿಯುತ್ತಾರೋ ಅವರ ಕೈ ಹಿಡಿದು ಮನೆ ಸೇರುತ್ತೇನೆ' ಎಂದು ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸುವ ಮೂಲಕ ಬಿಜೆಪಿ ಜತೆಗಿನ ಭಿನ್ನಾಭಿಪ್ರಾಯವನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಹಿರಂಗವಾಗಿಯೇ ಹೊರಹಾಕಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಪ್ರಸ್ತುತ ರೈತನಾಗಿದ್ದೇನೆ. ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಂತೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು. ಸಿಎಂ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಸಮಾಜ ಹಾಸ್ಟೆಲ್​ಗೆ ನಿವೇಶನ ಕೋರಲಷ್ಟೇ. ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬಾರದು, ಭೇಟಿ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಚರ್ಚೆ ನಡೆಯಲಿಲ್ಲ. ನಾನು ಈ ಸಂದರ್ಭದಲ್ಲಿ ಪಾಂತರದ ಬಗ್ಗೆ ಎಂದೂ ಚಿಂತಿಸಿಲ್ಲ ಎಂದರು.ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ, ಜೆಡಿಎಸ್​ ಮೈತ್ರಿಯಾಗಲಿದೆ ಎಂಬ ಬಗ್ಗೆ ನಾನು ಈ ಸಂದರ್ಭದಲ್ಲಿ ಉತ್ತರಿಸಲು ಹೋಗುವುದಿಲ್ಲ. ಆದರೆ, ನಾನು ಒಂದು ಸ್ಪಷ್ಟಪಡಿಸುತ್ತೇನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಫರ್ಧೆ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.

ಸುದ್ದಿಗೋಷ್ಠಿಗೆ ಗೈರಾಗಿದ್ದು ಇದೇ ನಾಯಕರು...: ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ವಿರೋಧಿಸಿ ತುಮಕೂರಿನಲ್ಲಿ ನಾನು ಸುದ್ದಿಗೋಷ್ಠಿ ನಡೆಸಲು ಮುಂದಾದಾಗ ಈಗ ಹೋರಾಟದ ಮುಂಚೂಣಿಯಲ್ಲಿರುವ ನಾಯಕರೇ ಜತೆಗೆ ಕೂರಲು ಹಿಂದೇಟು ಹಾಕಿದ್ದರು. ಜತೆಯಲ್ಲಿ ಕಾಫಿ ಕುಡಿದವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಎದ್ದು ಹೊರಗೆ ಹೋದರು. ಇಂತಹವರು ಈಗ ನನ್ನನ್ನು ಹೋರಾಟಕ್ಕೆ ಕರೆದರೆ ನಾನು ಹೋಗಲು ಸಾಧ್ಯವೇ ಎಂಗೊಳಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ನಾನು ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ಯೋಜನೆಯನ್ನು ರದ್ದುಗೊಳಿಸಿ ಹಣವನ್ನು ನಾಲೆ ಆಧುನೀಕರಣಕ್ಕೆ ಬಳಸಿಕೊಂಡಿದ್ದೇನೆ. ಕುಣಿಗಲ್​ಗೂ ಸಾಕಾಗುವಷ್ಟು ನೀರು ಹರಿಸಿದ್ದೇನೆ. ಇದನ್ನು ಅಂಕಿ, ಅಂಶ ಸಮೇತವಾಗಿಯೇ ಶಾಸಕ ಡಾ.ಎಚ್​.ಡಿ.ರಂಗನಾಥ್​ಗೆ ಕೆಡಿಪಿ ಸಭೆಯಲ್ಲಿಯೂ ವಿವರಿಸಿದ್ದೇನೆ ಎಂದರು. ತುಮಕೂರು ನಗರ ಬೆಳೆಯುತ್ತಿದ್ದು ಬುಗುಡನಹಳ್ಳಿ ಜತೆಗೆ ಮತ್ತೊಂದು ಕೆರೆಯಲ್ಲಿಯೂ ನೀರು ಸಂಗ್ರಹಿಸುವ ಅನಿವಾರ್ಯತೆಯಿದೆ ಇಂತಹ ಸಂದರ್ಭದಲ್ಲಿ ನೀರು ಬೇರೆಡೆಗೆ ಹರಿಯಲು ಆರಂಭಿಸಿದರೆ ಭವಿಷ್ಯದಲ್ಲಿ ತುಮಕೂರು, ಕೊರಟಗೆರೆ ನಗರಕ್ಕೆ ಕುಡಿಯುವ ನೀರು ಕೊಡಲು ಸಾಧ್ಯವಾಗದು. ಹಾಗಾಗಿ, ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ಅವೈಜ್ಞಾನಿಕ ಎಂದು ಪದೇಪದೆ ಹೇಳುತ್ತಿದ್ದೇನೆ ಎಂದರು.

ಸುರ್ಜೇವಾಲ ಸಭೆ ನಡೆಸುತ್ತಿರುವುದು ಸರಿಯಲ್ಲ!: ಸಿಎಂ ಬದಲಾವಣೆ ಬಗ್ಗೆ ದೆಹಲಿಯಲ್ಲಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣದಿಂದಲೂ ಸಿಎಂ ಬದಲಾವಣೆ ಇಲ್ಲ ಎಂಬುದು ನಮ್ಮ ಆಶಯ ಕೂಡ ಆಗಿದೆ ಎಂದು ಪುನರುಚ್ಚರಿಸಿದ ಸಹಕಾರ ಸಚಿವ ಕೆ.ಎನ್​.ರಾಜಣ್ಣ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್​ಸಿಂಗ್​ ಸುರ್ಜೇವಾಲ ರಾಜ್ಯದಲ್ಲಿ ಶಾಸಕರ ಸಭೆ ನಡೆಸುತ್ತಿರುವುದು ನನಗೆ ಸಮಾಧಾನ ತಂದಿಲ್ಲ ಎಂದರು. ಸಿಎಂ ಬದಲಾವಣೆಯನ್ನು ಹೈಕಮಾಂಡ್​ ಮಾಡಬೇಕು, ಎಲ್ಲ ಶಾಸಕರ ಅಭಿಪ್ರಾಯ ಪಡದೇ ಮಾಡಬೇಕು, ಪ್ರಸ್ತುತ ಸಂದರ್ಭದಲ್ಲಿ ಸಿಎಂ ಬದಲಾವಣೆ ಬಗ್ಗೆ ಶಾಸಕರಾಗಲಿ, ಹೈಕಮಾಂಡ್​ ಆಗಲಿ ಚಿಂತಿಸಿಲ್ಲ ಎಂದರು. ದೆಹಲಿ ಭೇಟಿ ಸಂದರ್ಭದಲ್ಲಿ ಹೈಕಮಾಂಡ್​ ಭೇಟಿ ಮಾಡುವುದು ವಾಡಿಕೆ, ನಿಗಮ ಮಂಡಳಿ, ವಿಧಾನ ಪರಿಷತ್​ ನಾಮನಿರ್ದೇಶಕ ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಭೇಟಿಯಾಗಿರಬಹುದು ಇದರಲ್ಲಿ ಯಾವುದೇ ಗೊಂದಲ ಮಾಡುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್​ನಲ್ಲಿ ಸಿಎಂ ಆಕಾಂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಡಾ.ಜಿ.ಪರಮೇಶ್ವರ ಕೂಡ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ, ಅಧಿಕಾರಕ್ಕೆ ತಂದಿದ್ದಾರೆ. ಎಂ.ಬಿ.ಪಾಟೀಲ್​, ಸತಿಶ್​ ಜಾರಕಿಹೊಳಿ, ಎಚ್​.ಕೆ.ಪಾಟೀಲ್​ ಸೇರಿದಂತೆ ಸಾಕಷ್ಟು ಜನ ನಾಯಕರಿಗೆ ಸಿಎಂ ಸ್ಥಾನಕ್ಕೇರುವ ಅರ್ಹತೆಯಿದೆ ಎಂದು ಡಿಕೆಶಿಗೆ ಟಾಂಗ್​ ನೀಡಿದರು.

ಯಾರೊ ಸ್ವಂತ ಹಿತಾಸಕ್ತಿಗೋ ರಾಜಕಾರಣಕ್ಕೋ ಬೇಕಾಗಿ ಹೋರಾಟಕ್ಕೆ ಬನ್ನಿ ಎಂದು ಕರೆದರೆ ಬಂದು ಕೇಸು ಹಾಕಿಸಿಕೊಳ್ಳಲು ನಾನು ಬರುವುದಿಲ್ಲ. ಜಿಲ್ಲೆಯ ಹಿತಾಸಕ್ತಿಯ ಕಾರಣಕ್ಕಾದರೆ ಬಹಿರಂಗ ಹೋರಾಟಕ್ಕೆ ಎಂದೋ ಸೇರಿಕೊಳ್ಳುತ್ತಿದ್ದೆ. ಆದರೆ, ಜಿಲ್ಲೆಯ ಹಿತಾಸಕ್ತಿಗಾಗಿ ನಡೆಯಬೇಕಿರುವ ಹೋರಾಟ ಪಾತೀತವಾಗಿ ರಾಜಕೀಯದ ಹೊರತಾಗಿ ನಡೆಯಬೇಕು.|  ಜೆ.ಸಿ.ಮಾಧುಸ್ವಾಮಿ ಮಾಜಿ ಸಚಿವ