ಜಿಲ್ಲೆ

ನಾನು ಮುಖ್ಯಮಂತ್ರಿಯಾದರೆ ಏನು ತಪ್ಪು ?

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದಲಿತರು ಮುಖ್ಯಮಂತ್ರಿ ಆಗಬಾರದೇ ? ನಾನು ದಲಿತನಾಗಿದ್ದು ಮುಖ್ಯಮಂತ್ರಿ ಆದರೆ ಏನು ತಪ್ಪು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಸಿಎಂ ಆಗಲು ಶಾಸಕಾಂಗ ಪಕ್ಷದಲ್ಲಿ ಆಯ್ಕೆಯಾಗಿ, ವರಿಷ್ಠರು ಒಪ್ಪಿಗೆ ಸೂಚಿಸಬೇಕಾಗುತ್ತದೆ. ಅದೆಲ್ಲವನ್ನೂ ಬಿಟ್ಟು ಮಾಧ್ಯಮದಲ್ಲಿ ನಾನು ಸಿಎಂ, ನಾನು ಸಿಎಂ ಎಂದು ಹೇಳಿಕೊಂಡರೆ ಆಗಲೂ ಸಾಧ್ಯವೇ? ಎಂದು ಪ್ರಶ್ನಿಸಿದರು.

ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಯಲ್ಲಿ ನಡೆಯಬೇಕಾಗಿದ್ದ ದಲಿತರ ಸಭೆ ಮುಂದೂಡಲಾಗಿದೆ. ದಲಿತ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ವಿಚಾರ ಹಾಗೂ ಸಮಸ್ಯೆ ಹೇಳಿಕೊಳ್ಳುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ದೆಹಲಿಯಲ್ಲಿ ಕುಳಿತು ಸಭೆ ರದ್ದು ಮಾಡಿಸಿರುವುದು ಎಲ್ಲವೂ ಮಾಧ್ಯಮ ಸೃಷ್ಟಿಯಾಗಿದೆ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ಐದು ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ ಎಂದರು.

ಎಷ್ಟೋ ದಲಿತರ ಕೊಲೆಯಾಗಿವೆ. ಈ ಕುರಿತು ಬಿಜೆಪಿಯವರು ಯಾವತ್ತಾದರೂ ಧ್ವನಿ ಎತ್ತಿದ್ದಾರಾ ಹಾಗೂ ಪ್ರತಿಭಟನೆ ಮಾಡಿದ್ದಾರಾ?. ಆಕಳಿಗೆ ಹಿಂಸೆ ನೀಡಿದವರಿಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಇದೇ ವಿಚಾರಕ್ಕೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.