ಸಾಗರ: ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಇದ್ದಾಗ ನಾವು ಮಾಡುವ ಪ್ರತಿಯೊಂದು ಕೆಲಸ ಅರ್ಥಪೂರ್ಣವಾಗಿರುತ್ತವೆ. ಧಾರ್ಮಿಕ ನಂಬಿಕೆ ಮತ್ತು ವಿಧೇಯತೆ ಬದುಕಿನ ಮಾರ್ಗವನ್ನು ಪೋಷಿಸುತ್ತದೆ ಎಂದು ಸೊರಬದ ಎಸಿಎಫ್ ಪ್ರವೀಣ್‌ಕುಮಾರ್ ಬಸ್ರೂರು ಹೇಳಿದರು.
ವರದಹಳ್ಳಿಯಲ್ಲಿ ಶ್ರೀ ಶ್ರೀಧರ ಸೇವಾ ಮಹಾಮಂಡಲ ಮತ್ತು ಮಲೆನಾಡು ಗಮಕ ಕಲಾ ಸಂಘದ ಆಶ್ರಯದಲ್ಲಿ ವಾರ ಕಾಲ ಹಮ್ಮಿಕೊಂಡಿದ್ದ 12ನೇ ವರ್ಷದ ಕಾವ್ಯ ವಾಚನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಮಾಡಿದ ಕೆಲಸ, ನನ್ನಿಂದ ಆದ ಕೆಲಸ ಎಂಬ ಅಹಂಕಾರ ಸಲ್ಲದು. ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಹಂಕಾರ ಕಳೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಖ್ಯಾತ ಗಾಯಕ ಶಶಿಧರ ಕೋಟೆ ಮಾತನಾಡಿ, ಭಕ್ತಿ, ಪ್ರೀತಿ ಮತ್ತು ನೀತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಶ್ರೀಧರಾಶ್ರಮದಲ್ಲಿ ಈ ಮೂರು ಸಂಗತಿಗಳು ಅನುಭವಕ್ಕೆ ಬರುತ್ತವೆ ಎಂದರು.
ಮಲೆನಾಡು ಗಮಕ ಕಲಾ ಕೇಂದ್ರದ ಅಧ್ಯಕ್ಷ ಕೆ.ಆರ್.ಕೃಷ್ಣಯ್ಯ ಮಾತನಾಡಿ, ಶ್ರೀಧರಾಶ್ರಮದಲ್ಲಿ ಶ್ರಾವಣ ಮಾಸದ ಸಂದರ್ಭ 14 ವರ್ಷಗಳ ಹಿಂದೆ ಗಮಕ ಪ್ರಸ್ತುತಿ ಆರಂಭಿಸಲಾಗಿದ್ದು, ಕರೊನಾ ಅವಧಿಯಲ್ಲಿ 2 ವರ್ಷ ಕಾರ್ಯಕ್ರಮ ಆಗಿರಲಿಲ್ಲ. 12ನೇ ವರ್ಷದ ಕಾರ್ಯಕ್ರಮದಲ್ಲಿ ಪರಮದೇವ ಕವಿಯ ತುರಂಗಭಾರತ, ಲಕ್ಷ್ಮೀಶ ಕವಿಯ ಜೈಮಿನಿ ಭಾರತ, ಕುಮಾರವ್ಯಾಸ ಭಾರತ ಕಾವ್ಯಗಳ ಭಾಗಗಳನ್ನು ಕಲಾವಿದರು ಪ್ರಸ್ತುತಪಡಿಸಿದ್ದಾರೆ. ಸ್ಥಳೀಯ ಕವಿ ಪರಮದೇವ ರಚಿಸಿದ ಕಾವ್ಯ ಮತ್ತು ಸ್ಥಳೀಯ ಕಲಾವಿದರನ್ನು ಒಳಗೊಂಡ ಈ ಸಾಲಿನ ಗಮಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ ಎಂದರು.