G.T.DEVEGOUDA 
ಜಿಲ್ಲೆ

ನಾನು ಕಾಂಗ್ರೆಸ್'ಗೆ ಸೇರ್ಪಡೆ ಕುರಿತು ಜನ ನಿರ್ಧಾರ ಮಾಡ್ತಾರೆ: ಜಿ.ಟಿ.ದೇವೇಗೌಡ

ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ನಾನು ಹೋಗುವ ಕುರಿತು ಕ್ಷೇತ್ರದ ಜನ ನಿರ್ಧಾರ ಮಾಡ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಅವರು ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದರು.

ಖುದ್ದು ರಾಹುಲ್‌ಗಾಂಧಿ ಮನೆಗೆ ಬರಲು ತಯಾರಿ ಮಾಡಿಕೊಂಡಿದ್ದರು. ಆದರೆ, ತಂದೆ ಸ್ಥಾನದಲ್ಲಿರುವ ಎಚ್.ಡಿ.ದೇವೇಗೌಡರ ಮಾತಿಗೆ ಮಣಿದು ಪಕ್ಷದಲ್ಲೇ ಉಳಿದುಕೊಂಡೆ. ಮುಂದಿನ ಮೂರು ವರ್ಷ ಜೆಡಿಎಸ್‌ನಲ್ಲೇ ಇರುತ್ತೇನೆ. ಮುಂದೆ ಕಾಂಗ್ರೆಸ್ ಪಕ್ಷವನ್ನು ಸೇರಬೇಕೋ..ಬೇಡವೋ ಜನ ತೀರ್ಮಾನ ಮಾಡ್ತಾರೆ ಎಂದರು.

ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಮಾತು ಎಚ್.ಡಿ.ಕುಮಾರಸ್ವಾಮಿ ಕೇಳಲಿಲ್ಲ. ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಸಿ.ಪಿ.ಯೋಗೇಶ್ವರ್ ಅವರನ್ನು ಒಗ್ಗೂಡಿಸಿದ್ದು ನಾನು. ಕೊನೆಗೆ ಅವರೇ ಸಂಸತ್ ಚುನಾವಣೆಯಲ್ಲಿ ಒಂದಾಗಿದ್ದರು. ಬಳಿಕ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ಗೊಂದಲವಾಯಿತು. ಅದೇ ವಿಚಾರಕ್ಕೆ ನನಗೂ, ಅವರಿಗೂ ಮನಸ್ತಾಪ ಉಂಟಾಯಿತು. ನನ್ನ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡರು ಎಂದು ಹೇಳಿದರು.

ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಯೋಗೇಶ್ವರ್ ಅಥವಾ ನಿಖಿಲ್ ಯಾರಿಗೇ ಟಿಕೆಟ್ ಕೊಡಿ. ಆದರೆ, ಯೋಗೇಶ್ವರ್‌ನ ಜತೆ ಇಟ್ಟುಕೊಳ್ಳಿ ಎಂದಿದ್ದೆ. ನನ್ನ ಮಾತನ್ನು ಕುಮಾರಸ್ವಾಮಿ ಕೇಳಲಿಲ್ಲ. ಚನ್ನಪಟ್ಟಣ ಸೋಲುವ ಕ್ಷೇತ್ರವಲ್ಲ. ನನಗೆ ಕುಮಾರಸ್ವಾಮಿ ಮೇಲೆ ಮುನಿಸಿರುವುದು ಸತ್ಯ. ಸಾ.ರಾ.ಮಹೇಶ್ ವಿಚಾರದಲ್ಲೂ ಬೇಸರವಿದೆ ಎಂದರು.

ಸಿದ್ದರಾಮಯ್ಯಗೆ ಜಿಟಿಡಿ ಬಗ್ಗೆ ಗೊತ್ತು. ನೇರವಾಗಿ ಸತ್ಯ ಹೇಳುತ್ತೇನೆ ಅಂತ ಅವರಿಗೆ ತಿಳಿದಿದೆ. ಈವರೆಗೆ ಯಾವುದೇ ಸಣ್ಣ ಕೆಲಸಕ್ಕೂ ಸಿದ್ದರಾಮಯ್ಯ, ಡಿಕೆಶಿ ಬಳಿ ಹೋಗಿಲ್ಲ. ಆದರೆ ಇನ್ಮುಂದೆ ಹೋಗ್ತೇನೆ ಎಂದು ಹೇಳಿದರು.

ಮುಡಾದಲ್ಲಿ ಜಿಟಿಡಿ ಅಕ್ಕನ ಮಗನ ಸೈಟು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ನಾಲ್ಕೈದು ಜನ ಅಕ್ಕ, ತಂಗಿಯರು ಇದ್ದಾರೆ. ಯಾರು ಏನು ಮಾಡ್ತಿದ್ದಾರೆ ಗೊತ್ತಿಲ್ಲ. ಮಹೇಂದ್ರನಿಗೆ ಕೊಟ್ಟಿರುವ ಸೈಟ್ ಬಗ್ಗೆ ಕೇಳಿದ್ದೇನೆ. ಅದು ಪಿತ್ರಾರ್ಜಿತ ಆಸ್ತಿ. ಮುಡಾದವರು ಜಮೀನು ಬದಲು ಸೈಟ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಪತ್ನಿ ಪ್ರಕರಣ, ನಮ್ಮ ಅಕ್ಕನ ಮಗನ ಪ್ರಕರಣ ಬೇರೆ ಬೇರೆ. ಒಂದು ವೇಳೆ ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಳ್ಳಲಿ. ಸೈಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಹೇಳಿದರು.