ಮರಿಯಮ್ಮನಹಳ್ಳಿ: ಸಮುದಾಯ ಭವನಗಳು ಸಾಮಾಜಿಕ ಬಾಂಧವ್ಯ ಮತ್ತು ಸಂಪರ್ಕ ಕಲ್ಪಿಸುವಲ್ಲಿ ಸಹಕಾರಿಯಾಗಿವೆ ಎಂದು ಬಿಎಂಎಂ ಸಂಸ್ಥೆಯ ಅಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ಹೇಳಿದರು.
ಡಣನಾಯಕನ ಕೆರೆ ಗ್ರಾಮದಲ್ಲಿ ಬಿಎಂಎಂ ಸಂಸ್ಥೆಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸಮುದಾಯ ಭವನಗಳ ನಿರ್ಮಾಣದ ಹಿಂದೆ ನಿರ್ದಿಷ್ಟ ಉದ್ದೇಶ ಇದೆ. ಯಾವುದೇ ಸಭೆ, ಸಮಾರಂಭ, ಮದುವೆ, ತರಬೇತಿ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂದರು.
ಗ್ರಾಮಗಳಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ರಮಗಳಿಗೆ ಸಾಮೂಹಿಕವಾಗಿ ಒಂದೆಡೆ ಸೇರಲು ಹಳ್ಳಿಗಳಲ್ಲಿ ಸ್ಥಳದ ಅಭಾವವಿದೆ. ಈ ಕೊರತೆ ನೀಗಿಸುವ ದೃಷ್ಟಿಯಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಸಮಾಜದಲ್ಲಿನ ಸಂಕೀರ್ಣತೆ ತೊಡೆದು, ಸೌಹಾರ್ದ, ಶಾಂತಿಯಿಂದ ಎಲ್ಲರೂ ಒಂದೆಡೆ ಸೇರಿ ಚರ್ಚಿಸಲು, ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಸಮುದಾಯ ಭವನಗಳು ಸಹಕಾರಿಯಾಗಿವೆ. ಇದನ್ನು ಉತ್ತಮ ಕೆಲಸ-ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿ. ಸಮುದಾಯ ಭವನದ ಶುಚಿತ್ವ ಮತ್ತು ರಕ್ಷಣೆ ಜನರ ಜವಾಬ್ದಾರಿಯಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ ಮುಂತಾದ ವಿಷಯಗಳ ಮಾಹಿತಿ ವಿನಿಮಯಕ್ಕೆ ಸಮುದಾಯ ಭವನಗಳು ಸೂಕ್ತ ವೇದಿಕೆಯಾಗಿವೆ. ಶಿಕ್ಷಣ, ಮತ್ತು ಜಾಗೃತಿ ಕಾರ್ಯಕ್ರಮ, ಆಕಸ್ಮಿಕ ಆಪತ್ತು ನಿರ್ವಹಣೆ, ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳ ಅನುಷ್ಠಾನ, ಮಹಿಳಾ ಸ್ವಸಹಾಯ ಸಂಘಗಳು, ಆರೋಗ್ಯ ಕಾರ್ಯಕರ್ತೆಯರು, ಯುವ ಸಂಘ-ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮಗಳಿಗೆ ಸದ್ಭಳಕೆಯಾಗಲಿ ಎಂದು ಗಣೇಶ್ ಹೆಗಡೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ನಾಗರಾಜ, ಉಪಾಧ್ಯಕ್ಷೆ ನೇತ್ರಾವತಿ ಜಯಪ್ರಕಾಶ್, ಪ್ರಮುಖರಾದ ಎ.ಮಂಜುನಾಥ, ರುದ್ರಪ್ಪ, ಉಪ್ಪಾರ್ ಸೋಮಪ್ಪ, ಎಚ್.ನಾಗಪ್ಪ, ಬಿ.ಆನಂದ, ಬಿಎಂಎಂ ಸಂಸ್ಥೆಯ ಅಧಿಕಾರಿಗಳಾದ ಲಿಂಗರಾಜ, ಮಂಜುನಾಥ ಚಿಕ್‌ಮಠ, ಸಿಎಸ್‌ಆರ್ ವಿಭಾಗದ ಅರುಣ್ ಕುಮಾರ್ ಎಂ. ಇದ್ದರು.