ಜಿಲ್ಲೆ

ನಾನಾ ಕಾಯಿಲೆಗಳಿಗೆ ಅಣಬೆ ರಾಮಬಾಣ

ಚಿತ್ರದುರ್ಗ: ಕ್ಯಾನ್ಸರ್ ಸೇರಿ ನಾನಾ ಕಾಯಿಲೆಗಳಿಗೆ ಅಣಬೆ ರಾಮಬಾಣವಾಗಿದೆ ಎಂದು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕ ಡಾ. ಕೆ. ಅಮರೇಶ್‌ಕುಮಾರ್ ಹೇಳಿದರು.

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಶುಕ್ರವಾರ ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಅಣಬೆ ಬೇಸಾಯ ಹಾಗೂ ಮಾರುಕಟ್ಟೆ ಮಾರ್ಗೋಪಾಯಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಣಬೆಯಲ್ಲಿ ಔಷಧೀಯ ಗುಣಗಳಿರುವುದರಿಂದ ಪ್ರಸ್ತುತ ಇದರ ಬಳಕೆ ಹೆಚ್ಚಾಗಿದೆ. ವಿಟಮಿನ್, ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ. ಅಣಬೆ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಡಿ. ಶಶಿಕಲಾಬಾಯಿ ಅವರು ಅಣಬೆ ಬೇಸಾಯದ ಕ್ರಮ ಹಾಗೂ ಮಾರುಕಟ್ಟೆ ಮಾರ್ಗೋಪಾಯಗಳ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳ ವಿಶೇಷ ಮಾಹಿತಿ, ಅಣಬೆ ಸಂಸ್ಕರಣೆ, ಶೇಖರಿಸುವ ವಿಧಾನ ತಿಳಿಸಿಕೊಟ್ಟರು.

ಬೈ ಬ್ಯಾಕ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಅಣಬೆ ಖರೀದಿಸುವುದಾಗಿ ತಿಳಿಸಿದರು.

ನಾಗರಾಜು, ತಿಪ್ಪೇಸ್ವಾಮಿ ಸೇರಿ ಗ್ರಾಮದ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಇದ್ದರು. ಅಂತಿಮ ವರ್ಷದ ತೋಟಗಾರಿಕೆ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.