ಮೈಸೂರು: ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಪೂರೈಸಿರುವ ದಸರಾ ಗಜಪಡೆ ಅ.5ರಂದು ಕಾಡಿಗೆ ವಾಪಸ್ ತೆರಳಲಿವೆ.
ಕಾಡಿನಿಂದ ನಾಡಿಗೆ ಬಂದು ಅರಮನೆಯಲ್ಲಿ ಬೀಡುಬಿಟ್ಟಿರುವ ಗಜಗಳು ಇದೀಗ ತಮ್ಮ ಶಿಬಿರಗಳಿಗೆ ಮರಳಲಿವೆ. ಅರಣ್ಯ ಇಲಾಖೆಯಿಂದ ಭಾನುವಾರ ಬೆಳಗ್ಗೆ 11ಕ್ಕೆ ಅರಮನೆ ಆವರಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಂದು ಆನೆಯನ್ನು ಲಾರಿಯಲ್ಲಿ ಹತ್ತಿಸಿ ವಾಪಸ್ ಸಾಕಾನೆ ಶಿಬಿರಗಳಿಗೆ ಕಳುಹಿಸಿಕೊಡಲಾಗುತ್ತದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಗಜಪಡೆ ನಾಯಕ ಅಭಿಮನ್ಯು, ಭೀಮ, ಶ್ರೀಕಂಠ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ್, ಗೋಪಿ, ಸುಗ್ರೀವ್, ಹೇಮಾವತಿ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ಲಕ್ಷ್ಮೀ, ದುಬಾರೆ ಶಿಬಿರದ ಕಾವೇರಿ, ಭೀಮನಕಟ್ಟೆ ಆನೆ ಶಿಬಿರದ ರೂಪಾ ತಮ್ಮ ಶಿಬಿರಗಳಿಗೆ ತೆರಳಲಿವೆ.
ಇಲ್ಲಿ ಅದ್ದೂರಿ ಆತಿಥ್ಯ ದೊರೆಯುತ್ತಿತ್ತು. ಹೊತ್ತು ಹೊತ್ತಿಗೆ ಮೇವು, ಪೌಷ್ಟಿಕ ಆಹಾರ ಸಿಗುತ್ತಿತ್ತು. ತಾಲೀಮು ಹೊರತುಪಡಿಸಿದರೆ ಬೇರೆ ಕೆಲಸವಿಲ್ಲದ ಕಾರಣ ಹೆಚ್ಚಿನ ಲವಲವಿಕೆಯಿಂದ ಸಂಭ್ರಮಿಸುತ್ತಿದ್ದವು. ನಗರದ ವಾತಾವರಣಕ್ಕೂ ಒಗ್ಗಿಕೊಂಡಿದ್ದವು. ಆದರೀಗ ಕಾಡಿನಲ್ಲಿರುವ ಶಿಬಿರಗಳಿಗೆ ಹೋಗಬೇಕಿದೆ. ದಸರಾದ ಸುಂದರ ಅನುಭವ, ನೆನಪುಗಳನ್ನು ಹೊತ್ತುಕೊಂಡು ಇಲ್ಲಿಂದ ತೆರಳಲು ಸಜ್ಜಾಗಿವೆ. ಇವುಗಳ ಸಾಗಾಟಕ್ಕಾಗಿ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿಕೊಂಡಿವೆ.
ಅ.2ರಂದು ಅರಮನೆಯಿಂದ ಬನ್ನಿಮಂಟಪದವರೆಗೂ ಸೇರಿದ್ದ ಅಪಾರ ಜನಸ್ತೋಮದ ನಡುವೆ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ರಾಜಗಾಂಭಿರ್ಯದಿಂದ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕುಮ್ಕಿ ಆನೆಗಳಾದ ಕಾವೇರಿ, ರೂಪಾ ಸೇರಿದಂತೆ ನಿಶಾನೆ, ನೌಪತ್ ಹಾಗೂ ಸಾಲಾನೆಗಳು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮನಗೆದ್ದಿವೆ.
ಈ ಜೋಶ್‌ನಲ್ಲಿರುವ ಆನೆಗಳು ಶನಿವಾರವೂ ಅರಮನೆ ಆವರಣದಲ್ಲಿ ವಿಶ್ರಾಂತಿ ಪಡೆದವು. ಜಂಬೂಸವಾರಿ ಮುಗಿದ ಬಳಿಕ ಗುರುವಾರ ಸಂಜೆಯಿಂದಲೇ ವಿರಾಮಕ್ಕೆ ಜಾರಿವೆ. ದಿನವಿಡೀ ಅರಮನೆ ಆವರಣದಲ್ಲಿ ಕಾಲ ಕಳೆದವು. ಆನೆಗಳಿಗೆ ಮೈತೊಳೆದು ಮೇವು ಹಾಕಿ ಆರೈಕೆ ಮಾಡಲಾಯಿತು. ಅರಮನೆ ವೀಕ್ಷಣೆಗೆ ಬಂದ ಪ್ರವಾಸಿಗರಲ್ಲಿ ಬಹುತೇಕರು ಗಜಪಡೆಯನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ಆದರೆ, ಅರಣ್ಯ ಇಲಾಖೆಯಿಂದ ಬಿಗಿ ಭದ್ರತೆ ಕಲ್ಪಿಸಿರುವುದರಿಂದ ಅವುಗಳ ಹತ್ತಿರ ಸುಳಿಯಲು ಸಾಧ್ಯವಾಗಲಿಲ್ಲ.