ಚಿಕ್ಕಮಗಳೂರು: ನಾಡು-ನುಡಿಯ ಏಳಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ ಎಂದು ಮಾಜಿ ಸಚಿವ ಸಗೀರ್ ಅಹಮದ್ ತಿಳಿಸಿದರು.
ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಕನ್ನಡ ಶ್ರೀ ಪ್ರಶಸ್ತಿಗೆ ಭಾಜನರಾದ ಸಗೀರ್ ಅಹಮದ್ ಅವರಿಗೆ ನಗರದಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಶ್ರೀಮಂತ ಸಂಸ್ಕೃತಿಯನ್ನು ಒಳಗೊಂಡಿದೆ. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದರೊಂದಿಗೆ ನಾಡು-ನುಡಿಯ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.
ತನ್ನ ಅಧಿಕಾರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಿಗೆ ಉಚಿತ ಬಸ್ ಪಾಸ್ ವಿತರಿಸಿದ್ದನ್ನು ಸ್ಮರಿಸಿಕೊಂಡ ಅವರು ಕನ್ನಡದ ಕೆಲಸ ಮಾಡುವವರಿಗೆ ಬೆನ್ನು ತಟ್ಟುವ ಕೆಲಸವನ್ನು ಮಾಡುವ ಮೂಲಕ ನಾಡು-ನುಡಿಯ ಕೆಲಸಕ್ಕೆ ಕೈಜೋಡಿಸುವುದು ಪುಣ್ಯದ ಕೆಲಸ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತ ಬಸ್ ಪಾಸ್ ನೀಡುವ ಮೂಲಕ ಕನ್ನಡದ ಕೆಲಸಕ್ಕೆ ಸಗೀರ್ ಅಹಮ್ಮದ್ ಅವರು ನೀಡಿದ ಕೊಡುಗೆ ಸ್ಮರಣೀಯ. ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶ್ರೀ ಪ್ರಶಸ್ತಿಯನ್ನು ಇದೇ ಕಾರಣಕ್ಕೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಕಸಾಪ ಅಧ್ಯಕ್ಷ ಮಾವಿನಕೆರೆ ದಯಾನಂದ್, ನಗರ ಘಟಕದ ಅಧ್ಯಕ್ಷ ಸಚಿನ್ ಸಿಂಗ್, ಚಿಕ್ಕಮಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್, ಸುಜಾತ, ಕೆಸವಿನಮನೆ ಭೈರೇಗೌಡ, ಎಚ್.ಆರ್.ನಂಜೇಗೌಡ ಉಪಸ್ಥಿತರಿದ್ದರು.