ಜಿಲ್ಲೆ

ನಾಡು-ನುಡಿ ರಕ್ಷಣೆಗೆ ಜಾಗೃತರಾಗಿ, ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಬಸವಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ಸಲಹೆ

ದೇವನಹಳ್ಳಿ: ಸಾಹಿತ್ಯ ಸಮ್ಮೇಳನ ಎಂದರೆ ಅಕ್ಷರ ಜಾತ್ರೆ ಜತೆಗೆ ನಾಡು-ನುಡಿ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಾಗೂ ಕನ್ನಡಿಗರ ಸುಪ್ತ ಮನಸ್ಸಿನ ಭಾವನೆಗಳನ್ನು ಎಚ್ಚರಗೊಳಿಸಿ ನಾಡಿನ ರಕ್ಷಣೆಗೆ ಜಾಗೃತಿಗೊಳಿಸುವ ಒಂದು ಭಾಗ ಎಂದು ವಿಜಯಪುರದ ಬಸವಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಬಿ.ಎನ್.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ದೇವನಹಳ್ಳಿ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳದ ಸಮಾರೋಪದಲ್ಲಿ ಹಲವು ವಿಷಯದ ಕುರಿತು ಅಭಿಪ್ರಾಯ ಮಂಡಿಸಿದರು.

12ನೇ ಶತಮಾನಕ್ಕೂ ಹಿಂದೆ ಹಳಗನ್ನಡ, ರಾಜಾಶ್ರಯದ ಸಾಹಿತ್ಯ ಚಾಲ್ತಿಯಲ್ಲಿತ್ತು. ಕಾಯಕಯೋಗಿ ಬಸವಣ್ಣ ಅವರು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದ ಬದಲಾವಣೆಗೆ ಮುಂದಡಿ ಇಟ್ಟರು. ಅಲ್ಲಿಂದ ಕನ್ನಡ ಸಾಹಿತ್ಯದ ದಿಕ್ಕು ಬದಲಾಯಿತು. ಇದರ ಒಂದು ಭಾಗವೇ ಸಮ್ಮೇಳನಗಳ ಕವಿಗೋಷ್ಠಿ, ವಿಚಾರಗೋಷ್ಠಿಗಳು ಎಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ತಾಲೂಕಿನಲ್ಲಿ ನಡೆದ 26 ಸಮ್ಮೇಳನಗಳಲ್ಲಿ 22ನ್ನು ವಿಜಯಪುರದಲ್ಲಿಯೇ ನಡೆಸಿದ ಕಸಾಪ ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್ ರಾಜ್ಯದಲ್ಲಿ ಅತಿ ಹೆಚ್ಚು ಸಮ್ಮೇಳನ ಆಯೋಜಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.

ಸಾಧಕರಿಗೆ ಸನ್ಮಾನ, ಯುವ ಪ್ರತಿಭೆಗಳಿಗೆ ವಿಚಾರಗೋಷ್ಠಿಗಳಲ್ಲಿ ಅವಕಾಶ ನೀಡುವ ಮೂಲಕ ಯಶಸ್ವಿಯಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಮ್ಮೇಳನದ ಸಂಚಾಲಕ ಬಿ.ಕೆ.ಶಿವಪ್ಪ, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ಜಿಪಂ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ಜೆಡಿಎಸ್ ಮಹಿಳಾ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ , ಕಸಾಪ ತಾಲೂಕು ಪದಾಧಿಕಾರಿಗಳಾದ ಎಸ್.ರಮೇಶ್‌ಕುಮಾರ್, ಶ್ರೀರಾಮಯ್ಯ, ಐಟಿ ರಾಮಾಂಜಿನಪ್ಪ, ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್, ಶಿಕ್ಷಕರ ಸಂಘದ ಬಿ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾರಾಯಣ್ ಇತರರು ಇದ್ದರು.

ಕನ್ನಡ ಜಾತ್ರೆ ಸಂಭ್ರಮ

ತಾಲೂಕಿನ 26ನೇ ಸಮ್ಮೇಳನ ಯಶಸ್ಸಿಗೆ ಕಸಾಪ ಪದಾಧಿಕಾರಿಗಳ ಒಗ್ಗಟ್ಟಿನ ಪರಿಶ್ರಮ ಹಾಗೂ ಕನ್ನಡ ಮನಸ್ಸುಗಳ ಸಹಕಾರ, ಎಲ್ಲ ಜನಪ್ರತಿನಿಧಿಗಳ ಪ್ರೋತ್ಸಾಹ ಕಾರಣ ಎಂದು ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ಅಭಿಪ್ರಾಯಪಟ್ಟರು.

ನಮಗೆ ಕನ್ನಡಮ್ಮನ ಸೇವೆ ಮಾಡಲು, ಕಾರ್ಯಕ್ರಮಗಳನ್ನು ಹೋಬಳಿ ಮಟ್ಟದಲ್ಲಿ, ಗ್ರಾಮೀಣ ಭಾಗದಲ್ಲಿಯೂ ಆಯೋಜಿಸಲು ಸ್ಫೂರ್ತಿ ಬಂದಿದೆ. ನಾಡು ಕಟ್ಟುವ ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸಕ್ಕೆ ಎಲ್ಲರ ಸಹಕಾರ ಮುಂದುವರಿಯಲಿ ಎಂದರು.

ಗಮನ ಸೆಳೆದ ಗಾಯನ

ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಕವನ ವಾಚಿಸಿದರು. ಕಿರುತೆರೆ ನಟ, ಪರಿವರ್ತನಾ ಕಲಾಸಂಸ್ಥೆಯ ದೇವನಹಳ್ಳಿ ದೇವರಾಜ್ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯಪುರದ ನಾಯ್ಡು ತಂಡದ ಹಾಡುಗಾರಿಕೆ, ನಾಡಗೀತೆ ಗಾಯನ ಎಲ್ಲರನ್ನು ರಂಜಿಸಿತು. ಉಪನ್ಯಾಸಕ ರವಿಕುಮಾರ್ ಆಶಯ ನುಡಿಗಳನ್ನಾಡಿದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿ, ಕಲಾವಿದರು, ಕೃಷಿ ಸಾಧಕರು ಸೇರಿ ಹಲವು ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಸೊಬಗು ಹೆಚ್ಚಿಸಿತು.

ನಂ.1 ವಿಜಯವಾಣಿ: ನಾಡಿನ ಹೆಮ್ಮಯ ಕನ್ನಡ ದಿನ ಪತ್ರಿಕೆ ವಿಜಯವಾಣಿ ಮುದ್ರಣ ಮಾಧ್ಯಮದಲ್ಲಿ ಸಂಚಲ ಸೃಷ್ಟಿಸುವ ಮೂಲಕ ನಂ.1 ಪತ್ರಿಕೆಯಾಗಿ ಗುರುತಿಸಿಕೊಂಡಿದೆ. ಹಾಗೆಯೇ ಸಮ್ಮೇಳನದ ಸಂಪೂರ್ಣ ಕಾರ್ಯಕ್ರಮವನ್ನು ವಿಶೇಷವಾಗಿ ಪ್ರಕಟಿಸುವಲ್ಲೂ ನಂ.1 ಸ್ಥಾನ ಪಡೆದಿದೆ ಎಂದು ಸಮ್ಮೇಳನದ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮುಕ್ತಕಂಠದಿಂದ ಶ್ಲಾಸಿದರು.

ದೇವನಹಳ್ಳಿಯ ಈ ಸಮ್ಮೇಳನದ ಮೂಲಕ ಕನ್ನಡಿಗರ ಒಗ್ಗಟ್ಟಿನ ಸಂದೇಶ ಹೋಗಬೇಕು. ಈ ನಮ್ಮ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂಬುದು ನನ್ನ ಆಶಯವಾಗಿದೆ. ಕನ್ನಡ ತಾಯಿ ಸರಸ್ವತಿ ಮತ್ತು ಕನ್ನಡಮ್ಮ ನಾಡದೇವಿ ಭುವನೇಶ್ವರಿ ದೇವಿಗೆ ನಾನು ನನ್ನ ನಿಮ್ಮೆಲ್ಲರ ಪರವಾಗಿ ನುಡಿನಮನ ಸಲ್ಲಿಸುತ್ತೇನೆ ಎಂದರು.