ಜಿಲ್ಲೆ

ನಾಡು-ನುಡಿ ಉಳಿವು ನಮ್ಮೆಲ್ಲರ ಹೊಣೆ

ಚಿತ್ರದುರ್ಗ: ಗಡಿ ಭಾಗದಲ್ಲಿ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡದ ನೆಲ, ಜಲ, ಭಾಷೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಹೇಳಿದರು.
ಚಿತ್ರದುರ್ಗ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಿರೇಗುಂಟನೂರು ತರಳಬಾಳು ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ, ಕರ್ನಾಟಕ ಸಂಭ್ರಮ-50,ಹೆಸರಾಯಿ ತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ಏರ್ಪಡಿಸಿದ್ದ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ ಪ್ರಾಯೋಗಿಕ ಗಾಯನ ತರಬೇತಿ, ಕನ್ನಡ ಗೀತಗಾಯನ, ಕವಿಕಾವ್ಯ ಪರಿಚಯ ಹಾಗೂ ಯೋಗ ತರಬೇತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡನಾಡನ್ನು ಸಮೃದ್ಧವಾಗಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಹಸಿರು ನೆಮ್ಮದಿ ತಾಣವಾದರೆ, ಕನ್ನಡ ನಮ್ಮೆಲ್ಲರ ಉಸಿರಾಗಬೇಕು, ಅನ್ಯಭಾಷೆಗಳ ಕಲಿಕೆ ತಪ್ಪಲ್ಲ. ಆದರೆ, ಮಾತೃಭಾಷೆ ಉಳಿವು-ಬೆಳವಣಿಗೆ ಅಗತ್ಯ ಎಂದರು.
ರಂಗಸೌರಭ ಕಲಾಸಂಘಕ್ಕೆ ಜಿಲ್ಲಾಡಳಿತ ಜಿಲ್ಲಾ ಕೇಂದ್ರದಲ್ಲಿ ನಿವೇಶನ ಮಂಜೂರು ಮಾಡಬೇಕಿದೆ ಎಂದರು.
ಮುಖ್ಯಶಿಕ್ಷಕ ಟಿ.ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್.ತಿಪ್ಪೇಸ್ವಾಮಿ, ಆರ್.ವಿದ್ಯಾಶ್ರೀ, ಪಿ.ಪುರುಷೋತ್ತಮ, ಎನ್.ಮರುಳಸಿದ್ದಯ್ಯ ಇದ್ದರು.
ಶಿಕ್ಷಕ ಎನ್.ಸುನಿಲ್ ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರ ಪರಿಚಯಾತ್ಮಕ ಲೇಖನ ವಾಚಿಸಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಗಾಯನ ಹಾಗೂ ಯೋಗಶಿಕ್ಷಕ ಎಂ.ಬಿ.ಮುರಳಿ ಯೋಗ ತರಬೇತಿ ನೀಡಿದರು. ಸ್ವಪ್ತಾ ಪ್ರಾರ್ಥಿಸಿದರು. ಶಿಕ್ಷಕ ಸಿದ್ದನಗೌಡ ಸ್ವಾಗತಿಸಿದರು.