ಬಾಗಲಕೋಟೆ: ‘ಕನ್ನಡ ನಾಡಿನ ಅನೇಕ ಆಚಾರ ವಿಚಾರ, ಸಂಸ್ಕೃತಿಗೆ ಶರಣರ ಕೊಡುಗೆ ಅಪಾರವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಹೇಳಿದರು.
ಕಾಯಕ ತತ್ವ, ದಾಸೋಹ ತತ್ವಗಳ ಜೊತೆಗೆ ಅನೇಕ ಸಾಮಾಜಿಕ ಚಿಂತನೆಗಳುಳ್ಳ ವಚನಗಳ ಮೂಲಕ ಶರಣ ಸಂಸ್ಕೃತಿ ಬೆಳೆದು ಬಂದದ್ದು, ಅಂತಹ ಶರಣ ಸಂಸ್ಕೃತಿಯ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಜಿಲ್ಲಾಡಾಳಿತ ಭವನ ಅಡಿಟೋರಿಯಂ ಹಾಲ್ ನಲ್ಲಿ ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆದ್ಯ ಶರಣ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಇಂದು ನಾಡಿನ ಪ್ರತಿ ಮನೆಮನೆಯಲ್ಲೂ ಪ್ರತಿನಿತ್ಯ ನಡೆಯುತ್ತಿರುವ ಪೂಜೆ, ಪುನಸ್ಕಾರಗಳು, ದಾನ ಧರ್ಮ, ದಾಸೋಹ ಹಿಂದೆ ನಮ್ಮ ಪೂರ್ವಜರು ಹಾಗೂ 12ನೇ ಶತಮಾನದ ಶರಣರ ವಚನಗಳ ಆದರ್ಶವಡಗಿದೆ. ಶರಣರಲ್ಲಿಯೇ ಅಗ್ರಸ್ಥಾನ ಪಡೆದುಕೊಂಡಂತ ಹಾಗೂ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯನವರು ಶರಣ ಶ್ರೇಷ್ಠರಾಗಿದ್ದು, ಭಕ್ತಿಯ ಮೂಲಕ ತತ್ವಶಾಸ್ತ್ರ ಹೇಳಿದಂತಹವರು ದಾಸಿಮಯ್ಯನವರು. ಅಂತಹ ಶರಣರನ್ನು ನಾವು ಒಂದು ಜನಾಂಗಕ್ಕೆ ಹಾಗೂ ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವರನ್ನಾಗಿ ಗುರುತಿಸಬೇಕಾಗಿದೆ’ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ, ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಹದೇವ ಬಸರಕೋಡ ಮಾತ ನಾಡಿ ‘ಮದುವೆಯಾಗಿ ಮರುದಿನವೇ ಡೈವೋರ್ಸ್ ಕೇಳುವ ಈ ಕಾಲಕ್ಕೆ ದಾಸಿಮಯ್ಯನವರ ದಾಂಪತ್ಯ ತತ್ವ ಆದರ್ಶನೀಯ. ಮತ್ತೆ ಆ ತತ್ವವನ್ನು ಜಗತ್ತಿಗೆ ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಮ್ಮ ವಚನಗಳ ಮೂಲಕ ಹಸಿವು, ಕೆಳ ಸ್ತರದ ನೋವು ಮುಂತಾದವುಗಳ ಕುರಿತು ವಿವರಿಸಿದ ಉದಾತ್ತ ಚಿಂತನೆಗಳ ದಾಸಿಮಯ್ಯನವರನ್ನು ಒಬ್ಬ ದೇವಪುರುಷನಂತೆ ಕಾಣದೇ, ಒಬ್ಬ ಚಾರಿತ್ರಿಕ ಪುರುಷನಂತೆ ಕಾಣಬೇಕಾಗಿದೆ’ ಎಂದರು.
ಇನ್ನೊರ್ವ ಉಪನ್ಯಾಸಕರಾದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಿವಶಂಕರ್ ಎನ್ ಮುತ್ತಗಿ, ಮಾತನಾಡಿ ‘ಸಂಸ್ಕೃತವನ್ನು ದೇವ ಭಾಷೆಯನ್ನಾಗಿ ಕಾಣುತ್ತಿದ್ದ ಸಮಯದಲ್ಲಿ ಬುದ್ಧ, ಮಹಾವೀರ, ದಾಸಿಮಯ್ಯನ ಮಹನೀಯರು ತಮ್ಮ ತಮ್ಮ ಮೂಲ ಭಾಷೆಗಳಲ್ಲಿಯೇ ತಮ್ಮ ಜನಾಂಗವನ್ನು ಕಟ್ಟಿ ಸುಧಾರಿಸಿದರು. ಬಸವಣ್ಣನವರ ವಿಚಾರಗಳಿಗೂ ಕೂಡ ಅಡಿಪಾಯ ಹಾಕಿಕೊಟ್ಟದ್ದು ದಾಸಿಮಯ್ಯನವರ ವಚನಗಳೇ ಎಂಬುದು ವಿಶೇಷ’ ಎಂದರು
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪುರ ಸ್ವಾಗತಿಸಿ, ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಣೆ ಮಾಡಿದರೆ ಮಂಜುಳಾ ಸಂಬಾಳಮಠ ಸುಗಮ ಸಂಗೀತ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ನೇಕಾರರ ಸಂಘದ ಮಾಜಿ ಅಧ್ಯಕ್ಷ ಡಾ. ಎಮ್ ಎಸ್ ದಡ್ಡೆಣ್ಣವರ್, ಬಿಡಿಸಿ ಸಿ ಬ್ಯಾಂಕ್ ನಿರ್ದೇಶಕ ಮುರುಗೇಶ್ ಕಡ್ಲಿಮಟ್ಟಿ, ಅಪೆಕ್ಸ್ ಬ್ಯಾಂಕಿನ ರವೀಂದ್ರ ಕಲಬುರ್ಗಿ, ನಗರಸಭೆ ಮಾಜಿ ಸದಸ್ಯೆ ಭಾಗ್ಯಶ್ರೀ ಹಂಡಿ, ಬಸವೇಶ್ವರ ಬ್ಯಾಂಕಿನ ನಿರ್ದೇಶಕ ಶ್ರೀನಿವಾಸ್ ಬಳ್ಳಾರಿ, ಸೇರಿದಂತೆ ಸಮುದಾಯದ ಹಿರಿಯರು ಉಪಸ್ಥಿತರಿದ್ದರು.