ಜಿಲ್ಲೆ

ನಾಡಿನ ಐತಿಹಾಸಿಕ ನೆಲೆಗಳ ಸಂರಕ್ಷಣೆ ಅಗತ್ಯ

ಬೈಲಹೊಂಗಲ: ಜಿಲ್ಲೆಯು ವೀರ ವನಿತೆಯರು, ಧೀರ ಶೂರರು ಆಳಿದ ಸುಂದರ ವಾಡೆಗಳಿಂದ ತುಂಬಿದ ಹೆಮ್ಮೆಯ ಬೀಡಾಗಿದ್ದು, ಈ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ ಸಾರುವ ಅರಮನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಕರ್ನಾಟಕ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ, ಸರ್ಕಾರಿ ವಸ್ತು ಸಂಗ್ರಹಾಲಯ ಕಿತ್ತೂರು, ಬೈಲಹೊಂಗಲದ ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜ್ ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಇತಿಹಾಸ ಪುನರ್ ನಿರ್ಮಾಣ ಮಾಡಲು ಕಿತ್ತೂರು ಅರಮನೆಯನ್ನು ಮತ್ತೊಮ್ಮೆ ನಿರ್ಮಿಸುವ ಕಾರ್ಯದಲ್ಲಿ ನಾವಿಂದು ತೊಡಗಿದ್ದೇವೆ. ಇತಿಹಾಸದ ಗತ ವೈಭವಕ್ಕೆ ಈ ನಾಡಿನ ಪ್ರತಿಯೊಬ್ಬರ ಆಳಿಲು ಸೇವೆ ಸದಾ ಇರಲೆಂದು ಆಶಯ ವ್ಯಕ್ತಪಡಿಸಿದರು. ಪ್ರೊ.ರ.ಮ ಷಡಕ್ಷರಯ್ಯ ಮಾತನಾಡಿ, ನಮ್ಮ ಭಾರತದ ಸಂಸ್ಕೃತಿ, ಪರಂಪರೆ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತವಾಗಿದೆ. ಭಾರತದ ವೈಭವ ಅರಿಯಲು ಸಂಶೋಧನೆಗಳು, ಅಧ್ಯಯನಗಳ ಅಗತ್ಯವಿದೆ ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಸಾಹಿತ್ಯ, ಕಲೆ ಸಂಸ್ಕೃತಿ ಮರೆಯಬಾರದು ಎಂದರು. ಶಾಖಾ ಮೂರುಸಾವಿರಮಠದ ಪೀಠಾಧೀಶ ಪ್ರಭುನೀಲಕಂಠ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ರಾಘವೇಂದ್ರ ಎಚ್.ಆರ್., ಎಸ್.ಐ.ವೆಂಕಟಪ್ಪಣ್ಣವರ, ಕು.ಸಂಗೀತಾ ಹಿರೇಮಠ, ಕು. ಚೈತ್ರಾ ಖಂಡೋಜಿ ಇತರರು ಇದ್ದರು.