ಜಿಲ್ಲೆ

ನಾಡಿಗೆ ಬಂದ ಕಾಡುಬೆಕ್ಕಿನ ರಕ್ಷಣೆ

ಮೂಡಿಗೆರೆ: ಪಟ್ಟಣಕ್ಕೆ ಮಂಗಳವಾರ ಬೆಳಗ್ಗೆ ಕಾಡಿನಿಂದ ಬಂದ ಕಾಡುಬೆಕ್ಕನ್ನು ಬೀದಿ ನಾಯಿಗಳು ಅಟ್ಟಾಡಿಸಿ ಕಚ್ಚಿ ಗಾಯಗೊಳಿಸಿದ್ದು, ಹೆದರಿದ ಕಾಡುಬೆಕ್ಕು ಮನೆಯ ಕಾಂಡೌಂಡ್‌ಗೆ ನುಗ್ಗಿದ್ದರಿಂದ ಪ್ರಾಣ ಉಳಿಯಿತು.

ಸುಶಾಂತ್ ನಗರದಲ್ಲಿರುವ ಶಾಸಕಿ ನಯನಾ ಮೋಟಮ್ಮ ಅವರ ಮನೆ ಬಳಿ ಕಾಡುಬೆಕ್ಕು ಬಂದಾಗ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಹೋಗಿ ಕಚ್ಚಿದವು. ನಾಯಿಗಳಿಂದ ತಪ್ಪಿಸಿಕೊಳ್ಳಲು ಕಾಡುಬೆಕ್ಕು ಕೆಲ ದೂರ ಓಡಿಹೋಗಿ ಪ್ರವೀಣ್ ಎಂಬುವವರ ಮನೆಯ ಗೇಟಿನೊಳಗೆ ನುಗ್ಗಿತು. ಅದನ್ನು ಗಮನಿಸಿದ ಮನೆಯ ಮಾಲೀಕ ಪ್ರವೀಣ್, ಅವರ ಪತ್ನಿ ಸವಿತಾ, ಬಡಾವಣೆಯ ನಿವಾಸಿ ಸುಧೀರ್ ಅವರು ಕಾಡುಬೆಕ್ಕನ್ನು ರಕ್ಷಿಸಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಡುಬೆಕ್ಕನ್ನು ಪಶು ಆಸ್ಪತ್ರೆಗೆ ಸಾಗಿಸಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದರು. ಕಾಡುಬೆಕ್ಕು ಚೇತರಿಸಿಕೊಂಡ ನಂತರ ಸುರಕ್ಷಿತವಾಗಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.