ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಬಳಿಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ಮೈಸೂರು ಜಿಲ್ಲೆಯ ವಿಶೇಷ!
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟಿರುವ ಹಿರಿಮೆಯನ್ನು ಮೈಸೂರು ಜಿಲ್ಲೆ ಹೊಂದಿದೆ. ಹುಣಸೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಡಿ.ದೇವರಾಜ ಅರಸು 2 ಬಾರಿ ಸಿಎಂ ಗಾದಿಗೆ ಏರಿದ್ದರು. ಅಂತೆಯೆ, ವರುಣ ಕ್ಷೇತ್ರದಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರೂ ಇದೀಗ 2ನೇ ಬಾರಿಗೆ ಮುಖ್ಯಮಂತ್ರಿ ಗದ್ದಿಗೆ ಏರಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮೈಸೂರು ಮಹತ್ವದ ಪಾತ್ರ ನಿರ್ವಹಿಸಿದೆ.
ಅರಸು, ಸಿದ್ದು 2 ಸಲ ಸಿಎಂ:
ಜಿಲ್ಲೆಯಿಂದ 2 ಸಲ ಸಿಎಂ ಹುದ್ದೆ ಪಡೆದ 2ನೇ ನಾಯಕ ಎಂಬ ಕೀರ್ತಿಗೆ ಸಿದ್ದರಾಮಯ್ಯ ಭಾಜನರಾಗಲಿದ್ದಾರೆ. 1972ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವಧಿ ಪೂರ್ಣಗೊಳಿಸಿದ್ದರು. 1978ರಲ್ಲಿ 2ನೇ ಸಲ ಆಯ್ಕೆಯಾದಾಗ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅರಸು ಅವರ ಬಳಿಕ 3 ದಶಕದ ನಂತರ ಸಿಎಂ ಸ್ಥಾನ 2013ರಲ್ಲಿ ಸಿದ್ದರಾಮಯ್ಯ ಮೂಲಕ ಜಿಲ್ಲೆಗೆ ದೊರೆಯಿತು. ಮತ್ತೆ ಒಂದು ದಶಕದ ಬಳಿಕ ಸಿದ್ದರಾಮಯ್ಯ ಮೂಲಕವೇ 2ನೇ ಬಾರಿಗೆ ದೊರೆತಿದೆ.. ಇದರೊಂದಿಗೆ ಜಿಲ್ಲೆಗೆ 4ನೇ ಬಾರಿಗೆ ಸಿಎಂ ಸ್ಥಾನ ಸಿಕ್ಕಂತಾಗಲಿದ್ದು, ಇಬ್ಬರಿಗೆ ತಲಾ ಎರಡು ಸಲ ಧಕ್ಕಿದಂತಾಗಿದೆ ಎಂಬುದು ಗಮನಾರ್ಹ.
ಅಂದು 165, ಇಂದು 135
ದೇವರಾಜ ಅರಸು ಅವರಿಗೆ ಹುಣಸೂರು ರಾಜಕೀಯ ಕರ್ಮಭೂಮಿಯಾದರೆ, ಸಿದ್ದರಾಮಯ್ಯ ಅವರಿಗೆ ವರುಣ ಅದೃಷ್ಣದ ಕ್ಷೇತ್ರ. ದ್ವಿಸದಸ್ಯ ಕ್ಷೇತ್ರವಾಗಿದ್ದ ಹುಣಸೂರಿನಿಂದ 1952, 1957ರ ಚುನಾವಣೆಗಳಲ್ಲಿ ಅರಸು ಗೆದ್ದು ಶಾಸಕರಾಗಿದ್ದರು. 1962ರಲ್ಲಿ ಏಕ ಸದಸ್ಯ ಕ್ಷೇತ್ರವಾಗಿ ಬದಲಾವಣೆಯಾದ ನಂತರ ಅರಸು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು. 1967ರ ಚುನಾವಣೆಯಲ್ಲಿ ಅರಸು ಮರು ಆಯ್ಕೆಯಾಗಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ 165 ಸ್ಥಾನ ಗಳಿಸಿದ್ದಾಗ ನಿರೀಕ್ಷೆಯಂತೆ ಅರಸು ಮುಖ್ಯಮಂತ್ರಿಯಾದರು. 1978ರಲ್ಲಿ ಅರಸು ಗೆದ್ದು ಮತ್ತೆ ಸಿಎಂ ಗಾದಿಗೆ ಏರಿದರು.
ಇದೀಗ 2023ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಆಗಲೂ ಕಾಂಗ್ರೆಸ್‌ಗೆ ಪ್ರಚಂಡ ಜಯ, ಈಗಲೂ ಭರ್ಜರಿ ಜಯ ದೊರೆತಿದೆ.
ಚಾಮುಂಡೇಶ್ವರಿ ಕರ್ಮಭೂಮಿ:
ಸಾಮಾನ್ಯ ಕುಟುಂಬದಿಂದ ಬಂದಿರುವ ಸಿದ್ದರಾಮಯ್ಯ ಜನನಾಯಕರಾಗಿ ರೂಪುಗೊಂಡಿದ್ದು ಚಾಮುಂಡೇಶ್ವರಿ ಕ್ಷೇತ್ರದಿಂದ. ಆದರೆ, ಸಿಎಂ ಆಗಿದ್ದು ವರುಣ ಕ್ಷೇತ್ರದಿಂದ ಎಂಬುದು ವಿಶೇಷ. ಚಾಮುಂಡೇಶ್ವರಿಯಿಂದ ‘ಡಿಸಿಎಂ’ ಆಗಿದ್ದರೆ, ವರುಣದಿಂದ ‘ಸಿಎಂ’ ಆಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ರಾಜಕೀಯ ಕರ್ಮಭೂಮಿ, ರಾಜಕೀಯ ಜನ್ಮ ನೀಡಿದ ಕ್ಷೇತ್ರವೂ ಹೌದು. ಇಲ್ಲಿ 8 ಸಲ ಸ್ಪರ್ಧಿಸಿರುವ ಅವರು 5 ಬಾರಿ ಗೆದ್ದಿದ್ದರೆ, 3 ಸಲ ಸೋಲು ಕಂಡಿದ್ದಾರೆ.
1983ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿದ್ದ ವಕೀಲ ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ಹೀಗೆ ರಾಜಕೀಯ ಜೀವನ ಶುರು ಮಾಡಿದ ಅವರು ಹಿಂದಕ್ಕೆ ತಿರುಗಿ ನೋಡಲೇ ಇಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಯುವಕರಾಗಿದ್ದ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾದರು.
ಇಲ್ಲಿಂದಲೇ ಡಿಸಿಎಂ:
1985ರಲ್ಲಿ ಜನತಾ ಪಕ್ಷದಿಂದ ಸಿದ್ದರಾಮಯ್ಯ ಗೆದ್ದು ಮೊದಲ ಬಾರಿಗೆ ಸಚಿವರಾದರು. ಹ್ಯಾಟ್ರಿಕ್ ಕನಸು ಕಂಡಿದ್ದ ಅವರು 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋತರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಜಯ ಸಾಧಿಸಿದರು. 1999ರಲ್ಲಿ ಮತ್ತೆ ಸೋತರು. 2004ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ನ ಎಲ್.ರೇವಣಸಿದ್ದಯ್ಯ ವಿರುದ್ಧ ಜಯ ದಾಖಲಿಸಿದರು. ಧರ್ಮಸಿಂಗ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.
ಬಳಿಕ ರಾಜಕೀಯ ಸ್ಥಿತ್ಯಂತರದಿಂದಾಗಿ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಇದರಿಂದ 2006ರಲ್ಲಿ ನಡೆದ ಉಪಚುನಾವಣೆ ಅವರ ರಾಜಕೀಯ ಭವಿಷ್ಯವನ್ನೇ ನಿರ್ಧರಿಸಿತು. ಅಂದಿನ ಜೆಡಿಎಸ್ ಸರ್ಕಾರ, ದೇವೇಗೌಡರ ಪ್ರಬಲ ಪೈಪೋಟಿಯ ನಡುವೆಯೂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಶಿವಬಸಪ್ಪ ವಿರುದ್ಧ ಜಯ ದಾಖಲಿಸಿದರು. ಇದು ಅವರಿಗೆ ರಾಜಕೀಯ ಮರುಜನ್ಮ ನೀಡಿತು. ಒಂದು ವೇಳೆ ಅಂದು ಸೋತಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಇಷ್ಟು ಮೇಲಕ್ಕೆರಲು ಆಗುತ್ತಿರಲಿಲ್ಲ.
ಕೈ ಹಿಡಿದ ವರುಣ ಕ್ಷೇತ್ರ:
ಕ್ಷೇತ್ರ ಮರು ವಿಂಗಡಣೆ ಬಳಿಕ ಉದಯಗೊಂಡ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ವಲಸೆ ಹೋದರು. ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯನ್ನು ಒಳಗೊಂಡಿರುವ ವರುಣದಿಂದ 2008ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಗಮನ ಸೆಳೆದರು. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದು ಇತಿಹಾಸ.
2018ರಲ್ಲಿ ವರುಣ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಗೆ ವಾಪಸ್ ಆಗಿ ಸೋತರು. ಆಗ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಅವರು ಅಲ್ಲಿಂದು ಗೆದ್ದು ಪ್ರತಿಪಕ್ಷ ನಾಯಕರಾಗಿದರು. ಇದೀಗ 2023ರ ಚುನಾವಣೆಗೆ ಮತ್ತೆ ವರುಣ ಕ್ಷೇತ್ರಕ್ಕೆ ವಾಪ ಆಗಿ ತಮ್ಮ ಕೊನೆಯ ಚುನಾವಣಾ ರಾಜಕೀಯದ ಅಗ್ನಿಪರೀಕ್ಷೆ ಎದುರಿಸಿದರು. ಅವರನ್ನು ಸೋಲಿಸಲು ಶತಾಯಗತಾಯ ಪ್ರಯತ್ನಿಸಿದ ಬಿಜೆಪಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿತ್ತು. ಆದರೆ, 46 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸಿದ್ದರಾಮಯ್ಯ ಆಯ್ಕೆಗೊಂಡರು.
ಇದರೊಂದಿಗೆ ಸಿಎಂ ಗಾದಿಗೆ ಹಕ್ಕುಮಂಡನೆ ಮಾಡಲು ಯಶಸ್ಸಿ ಆಗಿದ್ದಾರೆ. ಮೇ 20ರಂದು 33ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಈ ಮೂಲಕ ಸಿಎಂ ಸಿದ್ದರಾಮಯ್ಯ ರಾಜಕೀಯದ 2ನೇ ಇನ್ನಿಂಗ್ಸ್ ಶುರುವಾಗಿದೆ.