ಜಿಲ್ಲೆ

ನಾಡಗೌಡರ ಜಿಪಂ ನೂತನ ಅಧ್ಯಕ್ಷ

ಗದಗ: ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಈರಪ್ಪ ಈಶ್ವರಪ್ಪ ನಾಡಗೌಡರ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಕೊಣ್ಣೂರ ಜಿಪಂ ಸದಸ್ಯ ರಾಜೂಗೌಡ ಕೆಂಚನಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಜಿಪಂ ಸಭಾಭವನದಲ್ಲಿ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಈರಪ್ಪ ನಾಡಗೌಡರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈರಪ್ಪ ನಾಡಗೌಡರ ಅವರು ಜಿಪಂ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಘೋಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸುಂದರೇಶಬಾಬು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ., ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು. ಜಿಪಂ ಸದಸ್ಯರಾದ ವಾಸಣ್ಣ ಕುರಡಗಿ, ಎಸ್.ಪಿ. ಬಳಿಗಾರ, ಸಿದ್ಧಲಿಂಗೇಶ್ವರ ಪಾಟೀಲ, ರಾಜೂಗೌಡ ಕೆಂಚನಗೌಡ್ರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಿಪಂ ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.

19 ವರ್ಷಗಳ ನಂತರ ಜಿಪಂ ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಮುಂಡರಗಿ ತಾಲೂಕಿನ ಜನರಿಗೆ ಖುಷಿ ತಂದಿದೆ. ಮುಂಡರಗಿ ತಾಲೂಕಿನ ಹಮ್ಮಿಗಿ ಜಿಪಂ ಕ್ಷೇತ್ರದ ಸದಸ್ಯೆ ಶೋಭಾ ಮೇಟಿ ಅವರು ಸದ್ಯ ಜಿಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಪ್ರಭಾರ ಅಧ್ಯಕ್ಷರಾಗಿಯೂ ಶೋಭಾ ಮೇಟಿ ಕಾರ್ಯನಿರ್ವಹಿಸಿದ್ದಾರೆ. ಮುಂಡರಗಿ ತಾಲೂಕಿಗೆ ಒಂದೇ ಸಲಕ್ಕೆ ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ಡಬಲ್ ಧಮಾಕಾ ಎನಿಸಿದೆ.

ನನಗೆ ಸಿಕ್ಕಿರುವ ಅವಕಾಶದಲ್ಲಿ ಅವಧಿ ಕಡಿಮೆ ಇದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಮುಖ್ಯವಾಗಿ ಕರೊನಾ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ಗುರಿ ಇದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. |ಈರಪ್ಪ ನಾಡಗೌಡರ ಜಿಪಂ ನೂತನ ಅಧ್ಯಕ್ಷ

ಪ್ರಸ್ತುತ ಅವಧಿಯ ಐದನೇ ಅಧ್ಯಕ್ಷ!: 2017ರ ಫೆಬ್ರವರಿಯಲ್ಲಿ ಜರುಗಿದ ಜಿಪಂ ಚುನಾವಣೆಯಲ್ಲಿ ಜಿಪಂ 19 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿ ಮೇಲುಗೈ ಸಾಧಿಸಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಪುರುಷ ಮತ್ತು ಉಪಾಧ್ಯಕ್ಷ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ. ನಾಲ್ಕು ವರ್ಷ ಏಳು ತಿಂಗಳು ಅವಧಿಯಲ್ಲಿ ಸೊರಟೂರು ಜಿಪಂ ಸದಸ್ಯ ವಾಸಣ್ಣ ಕುರಡಗಿ, ಶಿಗ್ಲಿ ಜಿಪಂ ಸದಸ್ಯ ಎಸ್.ಪಿ. ಬಳಿಗಾರ, ಲಕ್ಕುಂಡಿ ಜಿಪಂ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಕೊಣ್ಣೂರು ಜಿಪಂ ಸದಸ್ಯ ರಾಜೂಗೌಡ ಕೆಂಚನಗೌಡ್ರ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಹಿರೇವಡ್ಡಟ್ಟಿ ಜಿಪಂ ಸದಸ್ಯ ಈರಪ್ಪ ನಾಡಗೌಡರ ಅಧ್ಯಕ್ಷರಾಗಿದ್ದು, ಉಳಿದ ಐದು ತಿಂಗಳು ಅವಧಿಗೆ ಇವರು ಅಧ್ಯಕ್ಷ ಕಾರ್ಯ ನಿರ್ವಹಿಸಲಿದ್ದಾರೆ.</