ತುಮಕೂರು: ನಾಡ ಬಂದೂಕುಗಳನ್ನು ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತರ ಜಾಲವನ್ನು ಭೇದಿಸಿರುವ ಗುಬ್ಬಿ ಠಾಣೆ ಪೊಲೀಸರು, 6 ಜನರನ್ನು ಬಂಧಿಸಿ, 4 ಬಂದೂಕು ಹಾಗೂ ಇನ್ನಿತರ ಪರಿಕರವನ್ನು ವಶಕ್ಕೆ ಪಡೆದಿದ್ದಾರೆ.
ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದ ಮಧುಚಂದ್ರ (29), ಶಿವಕುಮಾರ್ (24), ಉದ್ದೇ ಹೊಸಕೆರೆಯ ಮಂಜುನಾಥ (39), ಚಿಕ್ಕನಾಯಕನಹಳ್ಳಿ ತಾಲೂಕಿನ ಚೌಳಕಟ್ಟೆಯ ತಿಮ್ಮರಾಜು (45), ಮಾದಾಪುರದ ರವೀಶ್ (50) ಹಾಗೂ ತುಮಕೂರಿನ ಭೀಮಸಂದ್ರದ ಇಮ್ರಾನ್ ಪಾಷಾ (40) ಬಂಧಿತರು.
ಬೇಟೆಗೆ ಹೋದಾಗ ಬಯಲಾಯ್ತು!: ಆಗಸ್ಟ್ 12ರಂದು ರಾತ್ರಿ ವೇಳೆ ಆರೋಪಿ ಮಧುಚಂದ್ರ, ಶಿವಕುಮಾರ್ ಪರವಾನಗಿ ಇಲ್ಲದ ನಾಡ ಬಂದೂಕಿನೊಂದಿಗೆ ಅಕ್ರಮವಾಗಿ ಬೇಟೆಗೆ ತೆರಳಿದ್ದರು. ಈ ವೇಳೆ ತಿಪ್ಪೂರಿನ ದರ್ಶನ್ ಎಂಬುವವರು ಆಕ್ಷೇಪಿಸಿದ್ದಾರೆ. ಗಲಾಟೆಯಲ್ಲಿ ಬಂದೂಕು ಕೆಳಗೆಬಿದ್ದು ಗುಂಡು ಸಿಡಿದು ಸ್ಥಳದಲ್ಲೇ ಇದ್ದ ದರ್ಶನ್ ಪತ್ನಿ ಚೈತ್ರಾ ಗಾಯಗೊಂಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಗುಬ್ಬಿ ಠಾಣೆ ಪೊಲೀಸರು ಪ್ರಕರಣದ ತನಿಖೆ ವೇಳೆ ಅಕ್ರಮ ನಾಡಾ ಬಂದೂಕು ತಯಾರಿಸುವ ಜಾಲವನ್ನು ಭೇದಿಸಿದ್ದಾರೆ. ಆರೋಪಿಗಳು ಅಕ್ರಮವಾಗಿ ಹೊಂದಿದ್ದ 4 ಬಂದೂಕುಗಳು, ಬಂದೂಕಿನ ಬಿಡಿಭಾಗಗಳು ಹಾಗೂ ಬಂದೂಕು ತಯಾರಿಸುವ ಉಪಕರಣಗಳು ಮತ್ತು ಕಚ್ಚಾ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ.ಶೇಖರ್ ನೇತೃತ್ವದಲ್ಲಿ ಗುಬ್ಬಿ ಸಿಪಿಐ ಗೋಪಿನಾಥ್, ಪಿಎಸ್ ಐ ಜಿ.ಕೆ.ಸುನೀಲ್ ಕುಮಾರ್, ಪೇದೆಗಳಾದ ನವೀನ್ ಕುಮಾರ್, ವಿಜಯಕುಮಾರ್ ಜ್ಞಾನಾನಂದ, ಮಧುಸೂದನ, ಭೂತರಾಜು, ನಾಗರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಎರಡೂವರೆ ಸಾವಿರಕ್ಕೆ ಬಂದೂಕು!ಜಿಲ್ಲೆಯಲ್ಲಿ 2,530 ಸಾವಿರ ರೂ.ಗಳಿಗೆ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿದೆ. ಕಾಡು ಪ್ರಾಣಿಗಳನ್ನು ಭೇಟೆಯಾಡಲು ಬಳಸುವ ನಾಡಾ ಬಂದೂಕಗಳನ್ನು ಹಂದನಕೆರೆ ತೋಟದ ಮನೆಯೊಂದರಲ್ಲಿ ತಯಾರಿಸಲಾಗುತ್ತಿತ್ತು. ಬಂದೂಕಿನ ಬಿಡಿಭಾಗಗಳು, ಉಪಕರಣಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಂದೂಕು ತಯಾರಿಸುತ್ತಿದ್ದು, ಇದಕ್ಕೆ ಬೇಕಾದ ಲೇತ್ ಮತ್ತು ಡ್ರಿಲ್ಲಿಂಗ್ ಮಷಿನ್ ಮೂಲಕ ಇಮ್ರಾನ್ ಪಾಷಾ ಬಂದೂಕನ್ನು ಸಿದ್ಧಪಡಿಸಿಕೊಟ್ಟಿರುವುದಾಗಿ ತನಿಖೆ ವೇಳೆ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.