ಜಿಲ್ಲೆ

ನಾಟಿ ವೈದ್ಯರಿಗೆ ಪ್ರಮಾಣಪತ್ರ ನೀಡಿ

ಲಕ್ಷ್ಮೇಶ್ವರ: ಋಷಿ ಮುನಿಗಳ ಕಾಲದಿಂದಲೂ ಬಳಕೆಯಾಗುತ್ತ ಬಂದಿರುವ ನಾಟಿ ವೈದ್ಯ ಪದ್ಧತಿ ಭಾರತೀಯ ವೈದ್ಯಕೀಯ ಪದ್ಧತಿಗೆ ಮೂಲಾಧಾರವಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಕರಿಬಸವೇಶ್ವರ ಮಠದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್​ನ ಜಿಲ್ಲಾ ಮತ್ತು ತಾಲೂಕು ಘಟಕಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗದಗ ಜಿಲ್ಲಾ ಮಟ್ಟದ ಪಾರಂಪರಿಕ/ನಾಟಿ ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿಗೂ ಆಯುರ್ವೆದ ಔಷಧಗಳಿಗೆ ಸಾಕಷ್ಟು ಬೇಡಿಕೆ ಇದೆ. ಇವುಗಳಿಗೆ ಬ್ರ್ಯಾಂಡ್ ನೀಡಿ ಮಾರಾಟ ಮಾಡುವ ಕಂಪನಿಗಳು ಲಾಭದಲ್ಲಿವೆ. ಆದರೆ, ಗುಡ್ಡಗಾಡು ಸುತ್ತಿ ಔಷಧ ಸಿದ್ಧಪಡಿಸುವ ನಾಟಿ ವೈದ್ಯರ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯುಷ್ಯ ಇಲಾಖೆಯಿಂದ ಪ್ರಮಾಣಪತ್ರ ವಿತರಿಸಬೇಕು ಹಾಗೂ ಅವರಿಗೆ ಮಾಸಾಶನ ನೀಡಬೇಕು ಎಂದರು.

ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಎಲ್. ರಾಜು ಪಂಡಿತ್ ಮಾತನಾಡಿ, ನಾಟಿ ವೈದ್ಯರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ದೃಢ ನಿಲುವು ಕೈಗೊಂಡು ನಾಟಿ ವೈದ್ಯ ಪದ್ಧತಿ ಉಳಿಸಿ-ಬೆಳೆಸುವಲ್ಲಿ ಗಮನ ಹರಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಎಚ್.ಡಿ. ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ನಾಟಿ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಪ್ಪತಗುಡ್ಡದಲ್ಲಿನ ಪ್ರತಿಯೊಂದು ಗಿಡಮೂಲಿಕೆಗೆ ಭಯಾನಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಆದ್ದರಿಂದ ಇದು ಸಂಜೀವಿನಿ ಗುಡ್ಡವಾಗಿದೆ. ಸರ್ಕಾರ ಇಂಥ ವನೌಷಧ ಪ್ರದೇಶಗಳನ್ನು ಸಂರಕ್ಷಿಸಬೇಕು ಎಂದರು.

ಸಮ್ಮೇಳನದಲ್ಲಿ ಔಷಧ ವಿತರಿಸಲಾಯಿತು. ವೈದ್ಯ ಎಲ್. ರಾಜು ಪಂಡಿತ ವಿರಚಿತ ಸಂಜೀವಿನಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪಟ್ಟಣದ ಆಯುರ್ವೆದ ವೈದ್ಯಗುರು ಬಾಬುರಾವ್ ಕುಲಕರ್ಣಿ ಅವರ ಸ್ಮರಣೆಗಾಗಿ ಹಿರಿಯ ನಾಟಿ ವೈದ್ಯರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶ್ರೀಗಳು, ಕಪ್ಪತ್ತಗುಡ್ಡದ ಗುರುಶಾಂತವೀರಯ್ಯ ಶ್ರೀಗಳು ಆಶೀರ್ವಚನ ನೀಡಿದರು. ಮಂಜುನಾಥ ಕೊಕ್ಕರಗೊಂದಿ ಉಪನ್ಯಾಸ ನೀಡಿದರು. ನಾಟಿ ವೈದ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷೆ ಶಿವಲೀಲಾ ಪಾಟೀಲ, ತಾಲೂಕಾಧ್ಯಕ್ಷ ಶಂಕರಗೌಡ್ರ ಚಿಕ್ಕನಗೌಡ್ರ, ಶಿವಣ್ಣ ಮಹಾಂತಶೆಟ್ಟರ್, ಚಂದ್ರಣ್ಣ ಮೆಕ್ಕಿ, ವಿಜಯ ಕರಡಿ, ಚಂದ್ರಕಾಂತ ಉಳ್ಳಾಗಡ್ಡಿ, ಎಸ್.ವಿ. ಬಡ್ನಿ, ಬಸಣ್ಣ ಮಿಶ್ರಿಕೋಟಿ, ನಾಗರಾಜ ಮಾರನಬಿಡ, ಮಾನಪ್ಪ ಕಮ್ಮಾರ, ಶೇಖಣ್ಣ ಬಾಳಿಕಾಯಿ, ಫಕೀರಯ್ಯ ಕಲ್ಮಠ, ಲಲಿತಾ ಪಾಟೀಲ, ಶಿವಲಿಂಗಯ್ಯ ಕಲ್ಮಠ, ಸೋಮಪ್ಪ ಗೌರಿ, ನಿಂಗಪ್ಪ ಪೂಜಾರ, ರಾಮಪ್ಪ ಲಮಾಣಿ, ಯಲ್ಲಪ್ಪ ಬಸಾಪೂರ, ಎಸ್.ಡಿ.ಪುರದಪ್ಪನವರ, ಚಂದ್ರಕಾಂತ ಉಳ್ಳಾಗಡ್ಡಿ, ಸೋಮಪ್ಪ ಗೌರಿ, ಇತರರಿದ್ದರು. ಸುಜಯ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.