ಶಿರಸಿ: ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಗೋಡಿನ ನಾಟಿ ಔಷಧ ಕೇಂದ್ರವೊಂದರ ಮೇಲೆ ಗುರುವಾರ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ನೇತೃತ್ವದಲ್ಲಿ ದಾಳಿ ನಡೆಸಿ, ಕೇಂದ್ರಕ್ಕೆ ಬೀಗ ಹಾಕಲಾಯಿತು.
ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನರು ಒಂದೆಡೆ ಸೇರುವುದು ನಿಷೇಧವಿದ್ದಾಗ, ಈ ಕೇಂದ್ರದಲ್ಲಿ ರಾಜ್ಯದ ವಿವಿಧ ಭಾಗದ 100ಕ್ಕೂ ಹೆಚ್ಚು ಜನರಿರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಜ್ಯ ವಿವಿಧ ಜಿಲ್ಲೆಗಳ ಜನರು ಔಷಧಕ್ಕಾಗಿ ಬಂದಿದ್ದರು. ಕೇಂದ್ರ ನಡೆಸುತ್ತಿರುವ ಮಧುಕೇಶ್ವರ ಹೆಗಡೆ ಅವರು, ಜೇನುತುಪ್ಪದಲ್ಲಿ ಔಷಧ ಮಿಶ್ರಣ ಮಾಡಿ ರೋಗಿಗಳಿಗೆ ಕೊಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದರು. ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ಸರ್ಕಾರದ ಅನುಮತಿಯಿಲ್ಲದೇ ಕೇಂದ್ರವನ್ನು ಮತ್ತೆ ತೆರೆದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ, ಹಿರಿಯ ಆರೋಗ್ಯ ಸಹಾಯಕ ಎಫ್. ಎಸ್. ಡಿಸೋಜಾ, ಪಿಎಸ್ಐ ನಂಜಾ ನಾಯ್ಕ ಇದ್ದರು.</