ಹಾಸನ: ಬದುಕನ್ನು ಕಟ್ಟಿಕೊಡುವ ಜನಪದರು ಅನಿಸಿದ್ದನ್ನು ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ್ದಾರೆ. ನಾಜೂಕಿಗಿಂತ ಸತ್ಯ ದರ್ಶನ ಅವರಲ್ಲಿ ಪ್ರಧಾನವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ನಗರದ ಹಾಸನಾಂಬ ಮಹಾ ವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಬದುಕನ್ನು ನೇರವಾಗಿ ದರ್ಶನ ಮಾಡಿಸುವ ಶಕ್ತಿ ಇರುವ ಜನಪದದವನ್ನು ನಾಗರಿಕ ಸಮಾಜ ಸಂರಕ್ಷಣೆ ಮಾಡಬೇಕಿದೆ. ಆಧುನಿಕ ಜಗತ್ತಿನ ಜನರ ಪ್ರೀತಿ, ಭಕ್ತಿ, ಗೌರವ ಎಲ್ಲವೂ ನಟನೆಯೇ ಆಗಿ ಹೋಗಿದೆ. ಆಧುನಿಕ ಜಗತ್ತಿನವರು ನಟಿಸಿ, ನಟಿಸಿ ಆಯಸ್ಸು ಕಡಿಮೆ ಮಾಡಿಕೊಳ್ಳುತ್ತಿದ್ದರೆ, ಜನಪದರು ತಮ್ಮ ನಿಷ್ಠೂರತೆ, ನೇರವಂತಿಕೆಯಿಂದ ತಮ್ಮ ಆಯಸ್ಸು ಗಟ್ಟಿ ಗೊಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ನಮ್ಮ ಪರಿಷತ್ತು 1979ರಲ್ಲಿ ಆಗಿನ ಐಎಎಸ್ ಅಧಿಕಾರಿ ಎಚ್.ಎಲ್.ನಾಗೇಗೌಡ ಅವರಿಂದ ಸ್ಥಾಪನೆಗೊಂಡಿದೆ. ಕರ್ನಾಟಕದಲ್ಲಿ ಜಾನಪದ ಸಾಂಸ್ಕೃತಿ ಸಂಘಟನೆಗೆ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾದ ಕೀರ್ತಿ ಈ ಪರಿಷತ್ತಿಗಿದೆ. ಜಾನಪದದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಜನಪದ ಕಲೆಗಳು ಹಾಗೂ ಸಾಹಿತ್ಯದ ಸಂರಕ್ಷಣೆಗೆ ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಅವರಿಂದ ಸಹಾಯ ಪಡೆದ ಹಲವು ಶಿಷ್ಯರು, ಅವರ ನಿವೃತ್ತಿಯಾದಾಗ ದೇಣಿಗೆಯಾಗಿ ಕೊಟ್ಟಿದ್ದ 1.09 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆಗೆ ವಿನಿಯೋಗಿಸಿದರು ಎಂದು ಸ್ಮರಿಸಿದರು.
ಅಷ್ಟೇ ಅಲ್ಲದೇ ನಾಗೇಗೌಡರು ರಾಮನಗರದ ಬಳಿ 1994 ರಲ್ಲಿ ಜಾನಪದ ಲೋಕ ಎಂಬ ಹೆಸರಲ್ಲಿ 7.5 ಎಕರೆ ಪ್ರದೇಶದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಜಾನಪದ ಸಂರಕ್ಷಣೆ ಮತ್ತು ಸಂವರ್ಧನೆ ಅದರ ಮೂಲ ಉದ್ದೇಶವಾಗಿದೆ. ಅಲ್ಲದೇ ಜಾನಪದ ಗೀತೆಗಳ ಸಾವಿರಾರು ಕೃತಿಗಳು, ಧ್ವನಿ ಸುರುಳಿಗಳನ್ನು ಹೊರ ತಂದಿರುವ ಅವರು ರಾಜ್ಯಾಧ್ಯಂತ ಸಂಚರಿಸಿ ಪರಿಶಿಷ್ಠ ವರ್ಗದ ಕಲಾವಿದರ ಎಲ್ಲ ಕಲೆಗಳನ್ನು ಸಾಕ್ಷಾೃಚಿತ್ರಗಳ ಮೂಲಕ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಾಸನಾಂಬ ಕಾಲೇಜು ಪ್ರಾಂಶೂಪಾಲೆ ಡಾ.ಮಾಲಿನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಷತ್ತಿನ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಪದ ಸ್ವೀಕರಿಸಿದರು. ನಂಜಮ್ಮ, ಕಾಳಮ್ಮ, ಗೌರಮ್ಮ ಅವರು ಸೋಬಾನೆ ಪದಗಳನ್ನು ಹಾಡಿದರು. ಸ್ಥಳೀಯ ಕಲಾವಿದರ ಡೊಳ್ಳು ಕುಣಿತ ಮೆಚ್ಚುಗೆ ಗಳಿಸಿತು.
ಹಿರಿಯ ಸಾಹಿತಿ ಮೇಟಿಗೆರೆ ಹಿರಿಯಣ್ಣ, ಹಿರಿಯ ಕವಿ ಎನ್.ಎಲ್.ಚನ್ನೇಗೌಡ, ಕಲಾವಿದ ಯೋಗೀಂದ್ರ, ಬಿ.ಟಿ.ಮಾನವ, ತಾಲೂಕು ಘಟಕದ ನೂತನ ಅಧ್ಯಕ್ಷ ಟಿ.ಎಸ್. ಲಕ್ಷ್ಮಣ್, ನಿಕಟಪೂರ್ವ ಅಧ್ಯಕ್ಷ ಯೋಗೇಂದ್ರ ದುದ್ದ, ಗೌರವಾಧ್ಯಕ್ಷ ಶೀವನಂಜೇಗೌಡ, ನೂತನ ಉಪಾಧ್ಯಕ್ಷ ಪುನೀತ್ ಗೌತಂ, ಕಾರ್ಯದರ್ಶಿ ಶಿವರಾಂ, ಕೋಶಾಧ್ಯಕ್ಷರಾದ ಸುನಿತಾ, ವೀಣಾ, ಸಹ ಕಾರ್ಯದರ್ಶಿಗಳಾದ ಚಂದ್ರಕಲಾ, ದಿವಾಕರ, ರುದ್ರೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಡಿ.ಜೈಕುಮಾರ್ ದ್ಯಾವನೂರು ಮಂಜುನಾಥ್ ಇತರರಿದ್ದರು.