ಜಿಲ್ಲೆ

ನಾಗುರ(ಎಂ) ಯುವ ರೈತ ಸುನೀಲಕುಮಾರ ಬದುಕಿನಲ್ಲಿ ಖುಷಿ ತಂದ ರೋಸ್

ಮಲ್ಲಪ್ಪ ಗೌಡ ಔರಾದ್
ಸಾಂಪ್ರದಾಯಿಕ ಬೆಳೆಗಳಿಗೆ ಅಂತ್ಯ ಹಾಡಿ ವಾಣಿಜ್ಯ ಬೆಳೆಯತ್ತ ಮುಖ ಮಾಡಿರುವ ನಾಗುರ(ಎಂ) ಗ್ರಾಮದ ಯುವ ರೈತನೊಬ್ಬ ಗುಲಾಬಿ ಹೂ ಕೃಷಿ ಕೈಗೊಳ್ಳುವ ಮೂಲಕ ಬದುಕಿನಲ್ಲಿ ನೆಮ್ಮದಿ ಕಾಣತೊಡಗಿದ್ದಾರೆ. ಸುನೀಲಕುಮಾರ ಪಾಟೀಲ್ ಅವರೇ ತನ್ನ ಒಂದು ಎಕರೆ ಜಮೀನಿನಲ್ಲಿ ಶಿರಡಿ ತಳಿಯ ಗುಲಾಬಿ ಬೆಳೆಯುವ ಮೂಲಕ ಡಬಲ್ ಆದಾಯ ಪಡೆಯುವಲ್ಲಿ ಯಶಸ್ಸು ಕಂಡುಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಸುನೀಲಕುಮಾರ ಬಿಎಸ್ಸಿ, ಪಿಜಿಡಿಸಿಎ ಪದವೀಧರ. ಖಾಸಗಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕರೊನಾ ಮಹಾಮಾರಿಯಿಂದ ಶಾಲೆ ಬಿಟ್ಟು ಕೃಷಿಯತ್ತ ಮುಖ ಮಾಡಿದರು. ಪಟ್ಟಣಕ್ಕೆ ಹೈದರಾಬಾದ್ ಮತ್ತಿತರ ನಗರಗಳಿಂದ ಗುಲಾಬಿ ಹೂವು ತರಿಸುತ್ತಿರುವ ವಿಷಯ ಅರಿತ ತಕ್ಷಣ ನಮ್ಮಲ್ಲೇಕೆ ಹೂ ಕೃಷಿ ಮಾಡಬಾರದು ಎಂಬ ಯೋಚನೆಯೊಂದಿಗೆ ರೋಸ್ ಬೆಳೆಯಲು ಮುಂದಾಗಿದ್ದಾರೆ. ಅತಿ ಕಮ್ಮಿ ಅವಧಿಯಲ್ಲಿ ಇಳುವರಿ ಕೊಡುವ ಈ ಗುಲಾಬಿ ಎರಡು ವರ್ಷಗಳಿಂದ ಈತನ ಕೈಹಿಡಿದಿದೆ.

ಮಹಾರಾಷ್ಟ್ರದ ಪುಣೆಯಿಂದ ರೋಸ್ ಪ್ಲಾಂಟ್​ಗಳನ್ನು ತಂದು ಎರಡೂವರೆ ಅಡಿ ಉದ್ದ, ಅಡ್ಡಲಾಗಿ ಆರು ಅಡಿಗೆ ಒಂದರಂತೆ ಅಂದಾಜು 4000 ಸಸಿಗಳನ್ನು ನಾಟಿ ಮಾಡಲಾಗಿದೆ. ಇದಕ್ಕೆ 50-55 ಸಾವಿರ ರೂ. ವೆಚ್ಚವಾಗಿದೆ. ಹೊಲದಲ್ಲಿ ಒಂದು ತೆರೆದ ಬಾವಿ ಇರುವ ಕಾರಣ ನೀರಿನ ತೊಂದರೆ ಇಲ್ಲ. ಈ ಗಿಡಗಳು 10 ವರ್ಷ ಬೆಳೆ ನೀಡುತ್ತವೆ. ವರ್ಷಕ್ಕೊಮ್ಮೆ ಪ್ರತಿ ಗಿಡದ ಕಟಾವು ಮಾಡಲಾಗುತ್ತದೆ. ನಂತರ ಅದೇ ಗಿಡಗಳು ಮತ್ತೆ ಚಿಗುರೊಡೆದು ಹೂವು ನೀಡುತ್ತವೆ. ಇದರಿಂದ ರೈತರಿಗೆ ಮತ್ತೆ ಮತ್ತೆ ನಾಟಿ ಮಾಡುವ ಕಿರಿಕಿರಿ ಇರುವುದಿಲ್ಲ.

ತಿಂಗಳಿನಲ್ಲಿ 10-15 ಸಲ ಹೂವುಗಳನ್ನು ಕಟಾವು ಮಾಡುತ್ತಿದ್ದು, ಒಂದು ಬಾರಿಗೆ 15-20 ಕೆಜಿ ಬರುತ್ತಿವೆ. ಮಾರಾಟಗಾರರೇ ಹೊಲಕ್ಕೆ ಬಂದು ಕೆಜಿಗೆ 100-300 ರೂ.ನಂತೆ ಖರೀದಿ ಮಾಡುತ್ತಾರೆ. ಇದರಿಂದ ಎಲ್ಲ ಖಚರ್ು-ವೆಚ್ಚ ಹೋಗಿ ವರ್ಷಕ್ಕೆ 1.50 ಲಕ್ಷ ರೂ. ನಿವ್ವಳ ಆದಾಯ ಬರುತ್ತಿದೆ ಎನ್ನುತ್ತಾರೆ ಸುನೀಲಕುಮಾರ.

ಗಿಡಗಳಲ್ಲಿ ಗುಲಾಬಿ ಹೂವು ಕಾಣಿಸಿಕೊಳ್ಳುವವರೆಗೂ ಮುತುವರ್ಜಿ ವಹಿಸಬೇಕು. ಕಾಲಕಾಲಕ್ಕೆ ಅಗತ್ಯವಿರುವಷ್ಟು ಗೊಬ್ಬರ ಹಾಕಿ, ಔಷಧ ಸಿಂಪಡಿಸಬೇಕು. ನಾಟಿ ಮಾಡುವಾಗ ಮತ್ತು ವರ್ಷಕ್ಕೆ ಒಂದು ಬಾರಿಯಂತೆ ತಿಪ್ಪೆಗೊಬ್ಬರ ಹಾಕುವುದರಿಂದ ಫಸಲು ಚೆನ್ನಾಗಿ ಬರುತ್ತದೆ. ಎಕರೆಗೆ ಅಂದಾಜು 10 ಟನ್ ಬೇಕಾಗುತ್ತದೆ ಎಂದು ತಿಳಿಸುತ್ತಾರೆ.

ಒಂದು ಲಕ್ಷ ರೂ. ಸಹಾಯಧನ: ಗುಲಾಬಿ ಕೃಷಿ ಮಾಡಲು ತೋಟಗಾರಿಕೆ ಇಲಾಖೆಯಿಂದ ಒಂದು ಲಕ್ಷ ರೂ. ಸಹಾಯಧನ ಲಭಿಸಿರುವುದು ವರದಾನವಾಗಿ ಪರಿಣಮಿಸಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರದಿಂದ ಸಮೃದ್ಧ ಹೂ ಕೃಷಿ ಮಾಡಲು ಸಾಧ್ಯವಾಗಿದೆ ಅನ್ನುತಾರೆ ಯುವ ರೈತ ಸುನೀಲಕುಮಾರ ಪಾಟೀಲ್.

ತೋಟಗಾರಿಕೆ ಕೃಷಿ ಮಾಡುವವರಿಗೆ ಇಲಾಖೆಯಿಂದ ಹಲವಾರು ಯೋಜನೆಗಳಿವೆ. ರೈತರು ತೋಟಗಾರಿಕೆ ಕಚೇರಿಗೆ ಬಂದು ಸೂಕ್ತ ಮಾರ್ಗದರ್ಶನ, ಸಲಹೆ ಪಡೆದು ಉತ್ತಮ ವಾಣಿಜ್ಯ ಬೆಳೆ ಬೆಳೆದು ಹೆಚ್ಚಿನ ಆದಾಯ ವೃದ್ಧಿಸಿಕೊಳ್ಳಬೇಕು.
| ಪ್ರಿಯಂಕಾ, ಸಹಾಯಕ ತೋಟಗಾರಿಕೆ ಅಧಿಕಾರಿ

10 ಎಕರೆ ಜಮೀನಿನಲ್ಲಿ ಒಂದು ಎಕರೆ ಹೂವಿನ ಬೆಳೆ ಜತೆಗೆ ಶುಂಠಿ, ಬಿಳಿಜೋಳ, ಕುಸುಬೆ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಈ ಯಶಸ್ಸು ಕಂಡು ಸುತ್ತಲಿನ ರೈತರು ಕೂಡ ರೋಸ್ ಬೆಳೆಯಲು ಮುಂದಾಗುತ್ತಿರುವುದು ಖುಷಿ ತಂದಿದೆ.
| ಸುನೀಲಕುಮಾರ ಪಾಟೀಲ್, ಗುಲಾಬಿ ಕೃಷಿಯಲ್ಲಿ ಯಶ ಕಂಡ ರೈತ