ಜಿಲ್ಲೆ

ನಾಗಾಪುರ ದೀಕ್ಷಾಭೂಮಿಗೆ ಹೊರಟ ಅನುಯಾಯಿಗಳು

ಚಾಮರಾಜನಗರ: ನಾಗಾಪುರ ದೀಕ್ಷಾಭೂಮಿಗೆ ಪ್ರವಾಸ ಹೊರಟ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳ ಬಸ್‌ಗಳಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಂಗಳವಾರ ಚಾಲನೆ ನೀಡಿದರು.

ನಗರದಲ್ಲಿ ಚಾಮರಾಜನಗರ ತಾಲೂಕಿನಿಂದ ನಾಗಾಪುರ ದೀಕ್ಷಾಭೂಮಿಗೆ ಹೊರಟ 2 ಬಸ್‌ಗಳಿಗೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು. ಬುದ್ಧ ವಂದನೆ ಸ್ವೀಕರಿಸಿ ಪ್ರವಾಸ ಹೊರಟವರಿಗೆ ಶುಭ ಹಾರೈಸಿದರು.

ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸ್ಥಳ ದೀಕ್ಷಾ ಭೂಮಿಗೆ ಯಾತ್ರೆಗಾಗಿ ಉಚಿತ ಪ್ರವಾಸವನ್ನು ಸರ್ಕಾರದ ವತಿಯಿಂದ ಕಲ್ಪಿಸಲಾಗಿದೆ ಎಂದರು.

ನಾಗಾಪುರ ದೀಕ್ಷಾ ಭೂಮಿ ಪ್ರಸಿದ್ದ ಯಾತ್ರಾಸ್ಥಳವಾಗಿದ್ದು, ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಅಂಬೇಡ್ಕರ್ ಅನುಯಾಯಿಗಳು ಭೇಟಿ ನೀಡಿ ದೀಕ್ಷಾ ಭೂಮಿಯ ದರ್ಶನ ಪಡೆಯುತ್ತಿದ್ದಾರೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದ ಅವರು ಪ್ರವಾಸ ಹೊರಟವರು ತಂಡದ ಜೊತೆಯೇ ಇದ್ದು, ಅವಶ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ಮಾಡಿದರು.

ನಾಗಾಪುರದಲ್ಲಿರುವ ದೀಕ್ಷಾ ಭೂಮಿಗೆ ಪ್ರವಾಸ ಹೊರಡುವವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಿಂದ ಒಟ್ಟು 10 ಬಸ್‌ಗಳು ದೀಕ್ಷಾ ಭೂಮಿಗೆ ಪ್ರವಾಸ ಹೊರಟವು. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಿಂದ ತಲಾ 3, ಚಾಮರಾಜನಗರ 2 ಮತ್ತು ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕಿನಿಂದ ತಲಾ 1 ಬಸ್‌ಗಳಲ್ಲಿ ಪ್ರವಾಸಕ್ಕಾಗಿ ನೋಂದಾಯಿಸಿಕೊಂಡಿದ್ದ ಜಿಲ್ಲೆಯ ಒಟ್ಟು 395 ಅನುಯಾಯಿಗಳು ದೀಕ್ಷಾ ಭೂಮಿ ಪ್ರವಾಸಕ್ಕೆ ಹೊರಟರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ನಳಂದ ಬೌದ್ಧ ವಿಹಾರದ ಮಹೇಶ್, ಅಧಿಕಾರಿಗಳು, ಇತರರು ಇದ್ದರು.