ಜಿಲ್ಲೆ

ನಾಗರಿಕ ವಾರ್ಡ್ ಸಮಿತಿಗೆ ಗ್ರಹಣ!

ಜಗದೀಶ ಹೊಂಬಳಿ ಬೆಳಗಾವಿ: ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕಾಗಿ ‘ನಾಗರಿಕ ವಾರ್ಡ್ ಸಮಿತಿ’ ರಚಿಸಬೇಕೆಂಬ ಕಾನೂನಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು ಆಯ್ಕೆಯಾಗಿ ಮೂರುವರೆ ವರ್ಷ ಗತಿಸಿದರೂ ಈ ಕಾನೂನು ಪಾಲನೆಯಾಗುತ್ತಿಲ್ಲ.

ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ‘ನಾಗರಿಕರ ವಾರ್ಡ್ ಸಮಿತಿ’ ರಚಿಸಬೇಕೆಂಬ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ಸ್ ಕಾಯ್ದೆ ಇದೆ.

ಬೆಳಗಾವಿ ಮಹಾನಗರದಲ್ಲಿ ಸಮಿತಿ ರಚನೆಯಾಗದಿರುವುದು ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ಕರ್ನಾಟಕದ ಇತರ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿಗೆ ನೋಟಿಫಿಕೇಶನ್ ಆಗಿದ್ದು, ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ನಡೆದಿವೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಮಿತಿ ರಚನೆಗೆ ಅಧಿಕಾರಿಗಳು ಆಸಕ್ತಿ ತೋರದ ಕಾರಣ ಸಮಿತಿ ರಚನೆ ಕಾರ್ಯಕ್ಕೆ ಗ್ರಹಣ ಹಿಡಿದಿದೆ.

ಪಾಲಿಕೆ ಸದಸ್ಯರು ಆಯ್ಕೆಯಾದ ಬಳಿಕ ವಾರ್ಡ್ ಸಮಿತಿ ರಚಿಸುವಂತೆ ನಾಗರಿಕರು ಒತ್ತಾಯಿಸಿದ್ದರು. ಮೇಯರ್ ಆಯ್ಕೆ ಬಳಿಕ ಸಮಿತಿ ರಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಮೇಯರ್ ಆಯ್ಕೆ ಬಳಿಕ ವಿಧಾನಸಭೆ ಚುನಾವಣೆ ನೆಪ ಹೇಳಿದರು. ಆದಾದ ಬಳಿಕವೂ ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ಆರಂಭಿಸಿಲ್ಲ. ಸಮಿತಿ ರಚನೆಗೆ ಎರಡು ಬಾರಿ ನೋಟಿಫಿಕೇಶನ್ ಕರೆದರೂ ಸಮರ್ಪಕ ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ವಾರ್ಡ್ ಸಮಿತಿ ರಚನೆ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ನಾಗರಿಕರ ವಾರ್ಡ್ ಸಮಿತಿ?: ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಹಾಗೂ ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದೆಂಬ ಉದ್ದೇಶದಿಂದ ‘ನಾಗರಿಕರ ವಾರ್ಡ್ ಸಮಿತಿ’ ರಚಿಸುವ ಆದೇಶವಿದೆ. ‘ನಾಗರಿಕರ ವಾರ್ಡ್ ಸಮಿತಿ’ಯಲ್ಲಿ 3 ಮಹಿಳೆಯರು, ಪರಿಶಿಷ್ಟ ಜಾತಿಯ ಓರ್ವ ವ್ಯಕ್ತಿ, ಪರಿಶಿಷ್ಟ ಪಂಗಡದ ಓರ್ವ ವ್ಯಕ್ತಿ ಹಾಗೂ ನೋಂದಾಯಿತ ಸಂಘ-ಸಂಸ್ಥೆಗಳ ಇಬ್ಬರು ಸದಸ್ಯರು ಸೇರಿ 10 ಜನರಿರುತ್ತಾರೆ. ವಾರ್ಡ್ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ.

ಮಹಾಪೌರರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸಮಿತಿಗೆ ಮಹಾನಗರ ಪಾಲಿಕೆ ಆಯುಕ್ತರ ನಿರ್ದೇಶನ ನೀಡುತ್ತಾರೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಬೇಕು. ವಾರ್ಡ್‌ಗೆ ಬಿಡುಗಡೆಯಾದ ಅನುದಾನವು ಸಮಿತಿ ಗಮನಕ್ಕೆ ತಂದ ಬಳಿಕವೇ ಬಳಸಬೇಕೆಂಬ ನಿಯಮ ರೂಪಿಸಲಾಗಿದೆ. ವಾರ್ಡ್‌ನಲ್ಲಿ ಏನೇನು ಕುಂದು-ಕೊರತೆಗಳು ಇವೆ. ಯಾವ್ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆ ಸೇರಿ ಚರ್ಚಿಸಿ, ಅನುಮೋದನೆಗೆ ಕಳುಹಿಸಬೇಕು. ಇಷ್ಟೆಲ್ಲ ಮಹತ್ವದ ಹೊಂದಿರುವ ವಾರ್ಡ್ ಸಮಿತಿ ರಚಿಸುವುದಕ್ಕೆ ನಿರಾಸಕ್ತಿ ತೋರಿಸಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ನಾಗರಿಕರ ವಾರ್ಡ್ ಸಮಿತಿ ರಚಿಸುವುದಕ್ಕೆ ಎರಡು ಬಾರಿ ನೋಟಿಫಿಕೇಶನ್ ಮಾಡಲಾಗಿತ್ತು. ಕಾಯ್ದೆ ಪ್ರಕಾರ ವಾರ್ಡ್‌ಗಳಿಗೆ ಅಗತ್ಯ ಇರುವ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರಲಿಲ್ಲ. ಕೆಲ ವಾರ್ಡ್‌ಗಳಲ್ಲಿ ಹೆಚ್ಚು ಅರ್ಜಿಗಳು ಬಂದಿದ್ದವು. ಗಣೇಶ ಚತುರ್ಥಿ ಬಳಿಕ ವಾರ್ಡ್ ಸಮಿತಿ ರಚಿಸುವುದಕ್ಕೆ ಕ್ರಮ ವಹಿಸುತ್ತೇವೆ.|ಅಶೋಕ ದುಡಗುಂಟಿ ಮಹಾನಗರ ಪಾಲಿಕೆ ಆಯುಕ್ತ ಬೆಳಗಾವಿ