ಮೈಸೂರು: ಬೇರು ಸೇವಾ ಟ್ರಸ್ಟ್, ಬಿಜಿಎಸ್-ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ನಾಗರಹೊಳೆ, ಕಲ್ಲಹಳ್ಳ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿಗೆ ಇತ್ತೀಚೆಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಮಾತನಾಡಿದ ಎಸಿಎಫ್ ಅನನ್ಯಕುಮಾರ್, ಅರಣ್ಯ ಸಿಬ್ಬಂದಿಗೆ ಹೊರಗಿನ ಜಗತ್ತಿನಿಂದ ಸಹಕಾರ ಸಿಗುವುದು ಕಷ್ಟಕರವಾಗಿರುವ ಕಾರಣ ಬೇರು ಟ್ರಸ್ಟ್ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಬೇರು ಟ್ರಸ್ಟ್‌ನ ಸಂಸ್ಥಾಪಕ ನಿರ್ದೇಶಕಿ ಡಿ. ಸುಮನಾ ಕಿತ್ತೂರು ಮಾತನಾಡಿ, ಮಾನವೀಯ ಮೌಲ್ಯ, ಪ್ರಕೃತಿ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ತಂಡ ಕಾರ್ಯ ನಿರ್ವಹಿಸಲು ಸದಾ ಸಿದ್ಧವಿದೆ ಎಂದರು.
ಬೇರು ಟ್ರಸ್ಟಿ, ಕಲಾವಿದ ಕಿಶೋರ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು. ನಟಿ ಮೇಘನಾ ಗಾಂವ್ಕರ್ ಮಾತನಾಡಿ, ಪರಿಸರಕ್ಕೆ ಮತ್ತು ಅದರ ರಕ್ಷಕರಿಗೆ ನಾವು ಗೌರವ ನೀಡಬೇಕು ಎಂದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಪರೀಕ್ಷೆ, ಆಂಥ್ರೊಪೊಮೆಟ್ರಿ, ಡಯಾಬಿಟಿಕ್, ಬಿಪಿ ತಪಾಸಣೆ, ಹಿಮೋಗ್ಲೋಬಿನ್ ಪರೀಕ್ಷೆ, ಇಸಿಜಿ ಸೇವೆ ಒದಗಿಸಲಾಗಿತ್ತು. 70ಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ನಾಗರಹೊಳೆಯ ಸರ್ಕಾರಿ ವಾಲ್ಮೀಕಿ ಆಶ್ರಮಶಾಲೆಯ ಮಕ್ಕಳಿಗೂ ಚರ್ಮರೋಗದ ಸಂಬಂಧಿತ ತಪಾಸಣೆ ನಡೆಸಲಾಯಿತು. ಆರೋಗ್ಯ-ಆರೈಕೆ- ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡಲಾಯಿತು.
ಪ್ರಾಣಿಗಳ ರಕ್ಷಣಾ ಸಲಹೆಗಾರ ಡಾ. ಪ್ರಯಾಗ್, ಬಿಜಿಎಸ್ ವೈದ್ಯ ಡಾ. ಸತೀಶ್‌ಚಂದ್ರ ಅವರು, ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಎದುರಿಸುವ ಪ್ರಾಣಿಗಳ ಕಡಿತ ಮತ್ತು ನಂತರದ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸವಾಲು ಕುರಿತು ಸಂವಾದ ನಡೆಸಿಕೊಟ್ಟರು. ಅರಣ್ಯ ಇಲಾಖೆಯ ಮಂಜುನಾಥ್, ನವೀನ್‌ರಾವತ್, ಆಯೋಜಕರಾದ ರೇಖಾರಾಣಿ, ಸುಚಿತ್ರಾ ವೇಣುಗೋಪಾಲ್, ಶ್ರೀನಿವಾಸ್, ಸುರಭಿ, ವಿಷ್ಣು ಕುಮಾರ್, ಯಶೋದಾ, ಹರ್ಷಿತಾ ವಿಷ್ಣು, ಗಾಯತ್ರಿ ಇದ್ದರು.