ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶದಲ್ಲಿ ಆದಿವಾಸಿ ಕುಟುಂಬಗಳು ಮೊಕ್ಕಾಂ ಹೂಡಿರುವ ಪ್ರಕರಣ ಜಟಿಲಗೊಂಡಿದೆ.
ಜೇನು ಕುರುಬ ಸಮುದಾಯಕ್ಕೆ ಸೇರಿದ್ದ 52 ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆಯ ವೈಯಕ್ತಿಕ ಹಕ್ಕು, ಸಮುದಾಯ ಹಕ್ಕುಗಳನ್ನು ಮಾನ್ಯ ಮಾಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಇದು ಅರಣ್ಯ ಇಲಾಖೆ ತಲೆನೋವಾಗಿ ಪರಿಣಮಿಸಿದೆ.
ಅತ್ತೂರು ಕೊಲ್ಲಿ ಹೆಸರಿನ ಯಾವುದೇ ಹಾಡಿ ಇರಲಿಲ್ಲ. ಇಲ್ಲಿ ವ್ಯವಸಾಯ ಮಾಡಿರುವ ಕುರುಹುಗಳು ಲಭ್ಯ ಇಲ್ಲ. ಹೀಗಾಗಿ, ಇವರ ಬೇಡಿಕೆ ಮಾನ್ಯ ಮಾಡಲು ಸಾಧ್ಯವಿಲ್ಲ ಎಂಬುದು ಅರಣ್ಯ ಇಲಾಖೆ ವಾದವಾಗಿದೆ. ಜತೆಗೆ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಅಧ್ಯಕ್ಷೆಯ ಸಮಿತಿ ಸಭೆಯಲ್ಲೂ ಆದಿವಾಸಿಗಳ ಅರ್ಜಿ ತಿರಸ್ಕೃತಗೊಂಡಿದೆ.
ಆದಿವಾಸಿಗಳ ಅಹವಾಲಿಗೆ ಸ್ಪಂದಿಸಿ ಸಂರಕ್ಷಿತ ಅರಣ್ಯದಲ್ಲೇ ಜಾಗ ಮಾಡಿಕೊಟ್ಟರೆ ಭವಿಷ್ಯದಲ್ಲಿ ಇದೇ ರೀತಿ ಬೇಡಿಕೆ ಮಂಡಿಸಿ ಇನ್ನಷ್ಟು ಆದಿವಾಸಿಗಳು ಹಕ್ಕು ಮಂಡಿಸಬಹುದು. ಆಗ ಅಂದಾಜು 10 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.
ಕಳೆದ ಕೆಲವು ತಿಂಗಳಿಂದ ಸುದ್ದಿಯಲ್ಲಿರುವ ಈ ಸಂಗತಿ ಕುರಿತು ಪರಾಮರ್ಶಿಸುವ ಸಲುವಾಗಿ ಶನಿವಾರ ‘ವಿಜಯವಾಣಿ’ ಅತ್ತೂರು ಕೊಲ್ಲಿ ಪ್ರದೇಶಕ್ಕೆ ಭೇಟಿ ನೀಡಿತ್ತು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮ ಸಮೀಪ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿದೆ. ಜೇನು, ಅರಣ್ಯ ಉಪ ಉತ್ಪನ್ನಗಳ ಮಾರಾಟದಿಂದ ಇವರು ಜೀವನ ನಡೆಸುತ್ತಿದ್ದು, ಎಲ್ಲರೂ ಕಡುಬಡವರು, ಬಹುತೇಕರು ಅನಕ್ಷರಸ್ಥರು. ಮೇ 5ರಿಂದ ಇಲ್ಲೇ ಟಾರ್ಪಾಲ್ ಕಟ್ಟಿಕೊಂಡು ಮಕ್ಕಳೂ ಸೇರಿದಂತೆ ಅಂದಾಜು 200 ಆದಿವಾಸಿಗಳು ವಾಸ್ತವ್ಯ ಹೂಡಿದ್ದಾರೆ. ಕುಡಿಯುವ ನೀರು, ವಿದ್ಯುತ್, ಶೌಚಗೃಹ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿಲ್ಲ. ಒಂದು ಕಡೆ ಅಡುಗೆ ತಯಾರಿ ಸಾಮೂಹಿಕವಾಗಿ ಊಟ ಮಾಡುತ್ತಿದ್ದಾರೆ. ಮಕ್ಕಳು ಶಾಲೆಗೂ ಹೋಗುತ್ತಿಲ್ಲ.
ತಲತಲಾಂತರದಿಂದ ನಾವುಗಳು ಇಲ್ಲೇ ವಾಸಿಸುತ್ತಿದ್ದವು. ನಮ್ಮನ್ನು ಈ ಹಿಂದಿನ ದಶಕಗಳಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸಕ್ಕಾಗಿ ವಲಸೆ ಹೋಗಿದ್ದವು. ಇದೀಗ ಮೂಲ ಜಾಗಕ್ಕೆ ವಾಪಸ್ ಆಗಿದ್ದು, ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆದಿವಾಸಿಗಳು ಪಟ್ಟುಹಿಡಿದ್ದಾರೆ. ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಅಲ್ಲಿ ಹೊರಬರಬೇಕು ಎಂದು ಅರಣ್ಯ ಇಲಾಖೆ ಆದಿವಾಸಿಗಳಿಗೆ ನೋಟಿಸ್ ಕೊಟ್ಟಿದೆ.
2011ರಲ್ಲಿ ಮೊದಲ ಬಾರಿಗೆ ಹಕ್ಕು ಮಂಡಿಸಲಾಗಿದೆ. 2019ರಲ್ಲಿ ಸುಪ್ರೀಂಕೋರ್ಟ್ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತಗೊಂಡಿರುವ ಇವರ ಅರ್ಜಿಗಳ ಮರುಪರಿಶೀಲನೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 2020ರಲ್ಲಿ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಈ ಆದಿವಾಸಿಗಳು ಸಲ್ಲಿಸಿದ್ದ 44 ಅರಣ್ಯ ಹಕ್ಕುಗಳ ಅರ್ಜಿ ಪರಿಶೀಲಿಸಲಾಗಿತ್ತು. ಆದರೆ ಅರ್ಜಿದಾರರು ಪ್ರಸ್ತುತ ಜಾಗದಲ್ಲಿ ವಾಸ ಇಲ್ಲ. ದಾಖಲೆಯೂ ಇಲ್ಲ ಎಂದು ಅರಣ್ಯ ಇಲಾಖೆ ವಾದ ಮಂಡಿಸಿತ್ತು.
2022ರಲ್ಲಿ ಮಡಿಕೇರಿಯಲ್ಲಿ ನಡೆದ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಈ ಪ್ರದೇಶದಲ್ಲಿ ವಾಸವಿರುವ ಬಗ್ಗೆ, ಅರಣ್ಯ ಪ್ರದೇಶದ ಅನುಭೋಗ ಹೊಂದಿರುವ ಕುರಿತು ಪೂರಕ ದಾಖಲೆ ಸಲ್ಲಿಸದ ಕಾರಣಕ್ಕೆ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು.
2024ರಲ್ಲಿ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯು ಸರ್ವೇ ಕಾರ್ಯಗೆ ಸೂಚಿಸಿತ್ತು. ಭೂಮಾಪನಾ ಇಲಾಖೆಯ ಮೋಜಿಣಿದಾರರು, ಅರಣ್ಯ ಇಲಾಖೆಯ ಸಿಬ್ಬಂದಿ, ಅರ್ಜಿದಾರರ ಉಪಸ್ಥಿತಿಯಲ್ಲಿ ಅಂದಾಜು 500 ಎಕರೆ ಅರಣ್ಯ ಪ್ರದೇಶದ ಜಂಟಿ ಸರ್ವೇ ನಡೆಸಲಾಗಿದ್ದು, ಇಲ್ಲೂ ಈ ಪ್ರದೇಶವು ನೈಸರ್ಗಿಕ ಅರಣ್ಯವಾಗಿದ್ದು,ಈ ಜಾಗದಲ್ಲಿ ಅತ್ತೂರು ಕೊಲ್ಲಿ ಹೆಸರಿನ ಹಾಡಿಯು ಇಲ್ಲ.
ವ್ಯವಸಾಯದ ಕುರುಹುಗಳಿಲ್ಲ. ಈ ಹಿಂದೆ ಮತ್ತು ಪ್ರಸ್ತುತ ಅನುಭೋಗ ಹೊಂದಿರುವುದಿಲ್ಲ ಎಂಬ ಅಂಶವನ್ನು ಮಂಡಿಸಲಾಗಿದೆ. ಇದಕ್ಕೆ 1985, 2011, 2014, 2019, 2025 ಉಪಗ್ರಹ ಚಿತ್ರಗಳು ಆಧಾರವಾಗಿದೆ. 2006-07ರಲ್ಲಿ ಮೈಸೂರು ಕಾರ್ಯಯೋಜನೆ ಘಟಕದವರು ಸರ್ವೇ ನಡೆಸಿ ತಯಾರಿಸಿರುವ ನಕ್ಷೆಯಲ್ಲೂ ಅತ್ತೂರು ಕೊಲ್ಲಿ ಹೆಸರಿನ ಹಾಡಿ ಗುರುತಿಸಿಲ್ಲ ಎಂಬುದು ಅರಣ್ಯ ಇಲಾಖೆಯ ವಾದವಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನಿರ್ವಹಣಾ ಯೋಜನೆಯಲ್ಲಿ 43 ಹಾಡಿಗಳ ಹೆಸರು ನಮೂದಿಸಲಾಗಿದೆ. ಆದರೆ ಈ ಹಾಡಿಯ ಹೆಸರಿಲ್ಲ. 1999-2002ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರಮಣಯ್ಯ, ಡಾ.ನಾಗರಾಜು, ಡಾ.ಅಶೋಕ್ ಅವರು ಸಮೀಕ್ಷೆ ಮಾಡಿ ವರದಿ ತಯಾರಿಸಿದ್ದು, ಕೊಡಗು ಜಿಲ್ಲೆ ವ್ಯಾಪ್ತಿಗೆ ಒಳಪಡುವ ನಾಗರಹೊಳೆ ಉದ್ಯಾನವನದ ಭಾಗದಲ್ಲಿ 1041 ಆದಿವಾಸಿ ಕುಟುಂಬಗಳು, 3740 ಜನರನ್ನು ಹೆಸರಿಸಲಾಗಿದೆ.
ಆದರೆ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶದಲ್ಲಿ ಯಾವುದೇ ಹಾಡಿ, ಆದಿವಾಸಿ ಜನರನ್ನು ಗುರುತಿಸಿಲ್ಲ. ಈ ವಾಸ್ತವಾಂಶಗಳಿಂದ ಈ ಪ್ರದೇಶದಲ್ಲಿ ಈ ಹಿಂದೆ ಯಾವುದೇ ರೀತಿಯ ವ್ಯವಸಾಯ ನಡೆದಿಲ್ಲ. ಜನ ವಸತಿ ಇರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.
ಸಂರಕ್ಷಿತ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಡಿ 5 ಎನ್‌ಜಿಒ ಸದಸ್ಯರ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಆದರೆ ಆದಿವಾಸಿಗಳ ವಿರುದ್ಧ ಕೇಸ್ ದಾಖಲಿಸಿಲ್ಲ. ಜತೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ.
ಬದುಕಿದರೂ ಇದೇ ಜಾಗ, ಸತ್ತರೂ ಇದೇ ಜಾಗ. ಇದನ್ನು ಬಿಟ್ಟು ಎಲ್ಲಿಗೂ ಹೋಗಲ್ಲ. ಇಲ್ಲೇ ನಮ್ಮ ಮನೆಗಳ ಕುರುಹುಗಳಿವೆ. ನೆಲಬಾವಿ ಇದೆ. ಸ್ಮಶಾನ, ದೇವಸ್ಥಾನವೂ ಇದೆ. ಹೀಗಾಗಿ, ನಮ್ಮ ಹಕ್ಕು ಬೇಕಷ್ಟೆ. ಸುಶೀಲಾ, ಆದಿವಾಸಿ ಮಹಿಳೆ ನಾವು ಏಕೆ ಇಲ್ಲಿಯಿಂದ ಹೊರಗೆ ಹೋಗಬೇಕು? ಹುಟ್ಟಿ ಬೆಳೆದ ಕಾಡನ್ನು ಬಿಟ್ಟು ಎಲ್ಲಿಗೂ ಹೋಗಲ್ಲ. ಬೇರೆ ಕಡೆ ಜಾಗ ಕೊಟ್ಟು ಪುನರ್ವಸತಿ ಕಲ್ಪಿಸಿಕೊಟ್ಟರೂ ಹೋಗಲ್ಲ. ಇಲ್ಲೇ ಜಾಗ ಕೊಡಬೇಕು. ಡಿಸಿ ಸಭೆಯಲ್ಲಿ ಅರ್ಜಿ ತಿರಸ್ಕೃತವಾದರೆ ಕಾನೂನು ಹೋರಾಟ ಮಾಡುತ್ತೇವೆ. ಸುಧಾ, ಆದಿವಾಸಿ ಮಹಿಳೆ ಆದಿವಾಸಿ ಜನರು ಅಕ್ರಮ ಪ್ರವೇಶ ಮಾಡಿ ಮೊಕ್ಕಾಂ ಹೂಡಿದ್ದಾರೆ. ಅವರು ಬೇಡಿಕೆಗಳು ಮಾನ್ಯವಾಗಿಲ್ಲ. ಬೇಡಿಕೆಗೆ ಸಂಬಂಧಿಸಿದಂತೆ ಪೂರಕ ದಾಖಲೆಯಿಲ್ಲದ ಕಾರಣಕ್ಕೆ ಅರ್ಜಿಗಳೆಲ್ಲ ತಿರಸ್ಕೃತಗೊಂಡಿದೆ. ಮಾನವೀಯ ಹಿನ್ನೆಲೆಯಲ್ಲಿ ಆದಿವಾಸಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅನನ್ಯ ಕುಮಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ ವನ್ಯಜೀವಿ ಉಪವಿಭಾಗ