ದೇವದುರ್ಗ: ಹಾಲು ಹಾವಿನ ಆಹಾರವಲ್ಲ. ಮಹಿಳೆಯರು ಹುತ್ತಕ್ಕೆ ಹಾಕುವ ಹಾಲನ್ನು ಹಾವು ಕುಡಿಯಲ್ಲ. ಮಗುವಿನ ಬೆಳವಣಿಗೆಗೆ ಪೌಷ್ಟಿಕ ನೀಡುವ ಹಾಲನ್ನು ವ್ಯರ್ಥ ಮಾಡದೆ ಮಕ್ಕಳಿಗೆ ನೀಡಬೇಕು ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ಭಾನುಪ್ರಕಾಶ ಖೇಣೇದ್ ಹೇಳಿದರು.
ಪಟ್ಟಣದ ಮಾಳಗಡ್ಡೆ ಬಡಾವಣೆಯಲ್ಲಿ ನಾಗರ ಪಂಚಮಿ ನಿಮಿತ್ತ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಬಸವ ಪಂಚಮಿ ಹಾಗೂ ಮಕ್ಕಳಿಗೆ ಹಾಲುವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ನಾಗರ ಪಂಚಮಿ ಆಚರಣೆಯಲ್ಲಿ ಮೌಢ್ಯ ದೂರ ಮಾಡಬೇಕಿದೆ. ಮಾನವ ಬಂಧುತ್ವ ವೇದಿಕೆ ಬಸವ ಪಂಚಮಿ ಹಬ್ಬ ಮಾಡಿ ಬಡವರ ಮಕ್ಕಳಿಗೆ ಹಾಲು ವಿತರಣೆ ಮಾಡುವುದು ಉತ್ತಮ ಕಾರ್ಯ ಎಂದರು.
ಬಸವ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಪಾಟೀಲ್ ಮಾತನಾಡಿ, ಬಡತನ, ಅನಕ್ಷರತೆ, ಅಪೌಷ್ಟಿಕ ದೇಶಕ್ಕೆ ಅಂಟಿದ ರೋಗವಾಗಿದ್ದು, ನಿವಾರಣೆಗೆ ಸಮಾಜ ಮುಂದಾಗಬೇಕಿದೆ. ದೇಶದಲ್ಲಿ ಹಲವಾರು ಜನರು ಊಟಕ್ಕಾಗಿ ಸಂಕಷ್ಟ ಎದುರಿಸುವ ಸ್ಥಿತಿ ಕಾಣಬಹುದು. ಹೀಗಾಗಿ ಯಾರೇ ಆಗಲಿ ತಿನ್ನುವ ಆಹಾರ ವ್ಯರ್ಥ ಮಾಡಬಾರದು. ಮಿತ ಆಹಾರ ಆರೋಗ್ಯಕ್ಕೂ ಒಳೆಯಲು, ದೇಹಕ್ಕೂ ಒಳಿತು ಎಂದರು.
ಪುರಸಭೆ ಮಾಜಿ ಸದಸ್ಯ ಈರಣ್ಣ ರುದ್ರಾಕ್ಷಿ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಬ್ಯಾಗೋಟ, ಪ್ರಮುಖರಾದ ಹನುಮಂತ ಮನ್ನಪುರ, ರಂಗಪ್ಪ ಕೋತಿಗುಡ್ಡ, ರಮೇಶ ರಾಮನಾಳ, ಮೌನೇಶ್ ಗಾಣಧಾಳ, ವೆಂಕೋಬ ನಾಯಕ, ಶಿವರಾಜ್ ರುದ್ರಾಕ್ಷಿ, ಜಂಬಣ್ಣ ರುದ್ರಾಕ್ಷಿ, ಗೋಪಾಲ ರುದ್ರಾಕ್ಷಿ, ಶೇಖಪ್ಪ ರುದ್ರಾಕ್ಷಿ, ರವಿಚಂದ್ರನ್ ರುದ್ರಾಕ್ಷಿ, ಚಂದ್ರಲಿಂಗ ರುದ್ರಾಕ್ಷಿ ಇತರರಿದ್ದರು.