ಹುಮನಾಬಾದ್: ಹಳ್ಳಿಖೇಡ (ಬಿ)ದ ಶ್ರೀ ಸೀಮಿ ನಾಗನಾಥ ದೇವಸ್ಥಾನದಲ್ಲಿ ನಾಗಪಂಚಮಿ ನಿಮಿತ್ತ ಸೋಮವಾರ ವಿಶೇಷ ಪೂಜೆ, ಸಂಭ್ರಮದ ಪಲ್ಲಕ್ಕಿ ಉತ್ಸವ ಜರುಗಿದ್ದು, ಅಪಾರ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಬೆಳಗ್ಗೆಯಿಂದಲೇ ನಾಗನಾಥ ದೇವರಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ದಿನವಿಡೀ ಜರುಗಿದವು. ಬೆಳಗ್ಗೆಯಿಂದಲೇ ಮಹಿಳೆಯರು ಹೊಸ ಬಟ್ಟೆ ಧರಿಸಿ, ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ, ನಾಗಮೂರ್ತಿಗೆ ಹಾಲು ಎರೆದು, ಭಕ್ತಿ ಸಮರ್ಪಿಸಿದರು.
ಕರ್ನಾಟಕ ಸೇರಿ ಮಹಾರಾಷ್ಟç, ತೆಲಂಗಾಣದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಡೀ ದಿನ ಸರತಿಯಲ್ಲಿ ನಿಂತು ಭಕ್ತರು ದರ್ಶನ ಪಡೆದರು. ನಾಗಮಾಲಾ ಧಾರಿಗಳಿಂದ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ ಜರುಗಿದವು. ಸ್ಥಳೀಯ ಪುಟ್ಟರಾಜ ಗವಾಯಿ ಸಂಘದಿAದ ಸಂಗೀತ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಅಪಾರ ಭಕ್ತ ಸಮೂಹದ ಮದ್ಯೆ ಮಾಲಾಧಾರಿಗಳಿಂದ ನಾಗನಾಥ ದೇವರ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ನೆಲದ ಮೇಲೆ ಮಲಗಿದ್ದ ಭಕ್ತರ ಮೇಲೆ ಪಲ್ಲಕ್ಕಿ ಉತ್ಸವ ಕೊಂಡ್ಯೊಯ್ಯಲಾಯಿತು. ಪುರವಂತರು, ವಾದ್ಯ ಮೇಳಗಳು ನೋಡುಗರ ಕಣ್ಮನ ಸೆಳೆದವು.
ದೇವಸ್ಥಾನ ಸಮಿತಿ ಆಡಳಿತಾಧಿಕಾರಿಗಳ ಪರ ದೇವರಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಗಮೇಶ್ವರ ಫುಲಾರಿ, ಉಪ ತಹಸೀಲ್ದಾರ್ ಹಾವಗಿರಾವ ಮುದ್ದಾಳೆ, ಕಂದಾಯ ನಿರೀಕ್ಷಕ ಮುತ್ತಪ್ಪ ಕತ್ನಳ್ಳಿ, ಗ್ರಾಮ ಆಡಳಿತಾಧಿಕಾರಿ ಧರ್ಮಣ್ಣ ಹಂಜಗಿ, ಅರ್ಚಕರು ಇತರರಿದ್ದರು. ಎಎಸ್ಪಿ ಶಿವಾಂಶು ರಜಪೂತ, ಸಿಪಿಐ ಗುರು ಪಾಟೀಲ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.