ಸಿರಗುಪ್ಪ: ಪಟ್ಟಣದ ನೀಲಾಂಜನ ಬಡವಾಣೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ನಾಗದೇವರ ಶಿಲಾ ಮೂರ್ತಿ ಪ್ರತಿಷ್ಠಾಪನೆ ಭಾನುವಾರ ನಡೆಯಿತು.
ರೌಡಕುಂದಿ ಸಂಸ್ಥಾನ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನಾಗದೇವತೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು. ಪುರಾಣದ ಪ್ರಕಾರ ಸುಬ್ರಹ್ಮಣ್ಯ ಸ್ವಾಮಿಯನ್ನು ಸರ್ಪಗಳ ಪ್ರಭು ಎಂದು ಹೇಳಲಾಗುತ್ತದೆ. ಮುಕ್ತಿ ನಾಗ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನೇ ಆರಾಧ್ಯ ದೈವವನ್ನಾಗಿ ಪೂಜಿಸಲಾಗುತ್ತದೆ ಎಂದರು.
ನಂತರ ವಿಗ್ರಹ ರೂಪದಲ್ಲಿರುವ ದೇವತೆಗಳನ್ನು ಪೂಜಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಹೋಮ-ಹವನ, ತೀರ್ಥ-ಪ್ರಸಾದ ವಿತರಣೆ ನಡೆಯಿತು. ವೆಂಕಟೇಶ ಆಚಾರಿ ತಂಡದಿಂದ ಹೋಮ ನಡೆಯಿತು. ಮಹಿಳೆಯರು ಭಜನೆ ಪದಗಳನ್ನು ಹಾಡಿದರು. ತ್ಯಾಗರಾಜ, ಬಾಲಾಜಿ, ನೀಲಾಂಜನ ಬಡವಾಣೆಯ ಮಹಿಳೆಯರು ಭಾಗವಹಿಸಿದ್ದರು.