ಜಿಲ್ಲೆ

ನಾಗಣ್ಣನಗರ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಹನೂರು : ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ತಾಲೂಕಿನ ನಾಗಣ್ಣನಗರ ಗ್ರಾಮಕ್ಕೆ ಭಾನುವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.
ನಾಗಣ್ಣನಗರದಲ್ಲ್ಲಿ ಜನರು ನೆಲೆ ನಿಂತು ಸುಮಾರು 20ಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಪ್ರಸ್ತುತ ತೋಟದ ಮನೆಗಳು ಸೇರಿದಂತೆ 120ಕ್ಕೂ ಹೆಚ್ಚು ಕುಟುಂಬಗಳಿದ್ದು, ಸುಮಾರು 950 ಜನಸಂಖ್ಯೆ ಇದೆ. ಈ ಹಿಂದೆ ಈ ಗ್ರಾಮವು ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಗ್ರಾಮದ ಅಂತರ ಹೆಚ್ಚಾಗಿದ್ದ ಕಾರಣ ಸಮೀಪದ ಗ್ರಾಪಂಗೆ ಸೇರಿಸಲಾಯಿತು. ಆದರೆ ಇದುವರೆಗೂ ಸರ್ಕಾರದ ಹಂತದಲ್ಲಿ ಈ ಗ್ರಾಮದ ಹೆಸರು ನಮೂದಾಗಿಲ್ಲ. ಪರಿಣಾಮ ಇಲ್ಲಿನ ಜನರು ಮೂಲಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಗ್ರಾಪಂ ವತಿಯಿಂದ ಮನೆ, ಶೌಚಗೃಹ ಹಾಗೂ ಇ-ಸ್ವತ್ತು ಸೇರಿದಂತೆ ಸರ್ಕಾರ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಉಡುತೊರೆ ಹಳ್ಳಕ್ಕೆ ರೈತರೇ ಸ್ವತಃ ಹಣ ಸಂಗ್ರಹಿಸಿ ತಾತ್ಕಾಲಿಕವಾಗಿ ಮಣ್ಣಿನ ಸೇತುವೆ ನಿರ್ಮಿಸಿಕೊಂಡಿದ್ದರು.
ಗ್ರಾಮದ ನೂರಾರು ರೈತರು ಸುಮಾರು 1,200 ಎಕರೆಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಇವರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ ಆರ್‌ಟಿಸಿ ದೋಷದಿಂದ ಕೂಡಿದ್ದು, ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಸಲಕರಣೆ ಪಡೆಯಲು ಹಾಗೂ ಸರ್ಕಾರದಿಂದ ಸಹಾಯ ಧನ ಸಿಗುತ್ತಿಲ್ಲ. ಈ ಬಗ್ಗೆ ಸರ್ವೇ ಕಾರ್ಯ ನಡೆಸಿ ನಿಖರ ಆರ್‌ಟಿಸಿ ನೀಡುವಂತೆ ಕಂದಾಯ ಇಲಾಖೆಗೆ ಮೂರ‌್ನಾಲ್ಕು ವರ್ಷದಿಂದ ಇಲ್ಲಿನ ರೈತರು ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಕುರಿತು ಮಾ.31ರ ‘ವಿಜಯವಾಣಿ’ ಪತ್ರಿಕೆಯಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಶೀರ್ಷಿಕೆಯಡಿ ವಿಸ್ತತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಶ್ರೀನಿವಾಸ್, ಪಿಡಿಒ ಮಹದೇವಸ್ವಾಮಿ ಹಾಗೂ ಗ್ರಾಮ ಅಡಳಿತ ಅಧಿಕಾರಿ ವಿನೋದ್ ಗ್ರಾಮಕ್ಕೆ ಭೇಟಿ ನೀಡಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ಅಧಿಕಾರಿಗಳು, ಗ್ರಾಪಂನಲ್ಲಿ ಗ್ರಾಮದ ಹೆಸರು ನಮೂದು ಸಂಬಂಧದ ವರದಿಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸದ್ಯದಲ್ಲಿಯೇ ಈ ಕಾರ್ಯ ಪೂರ್ಣಗೊಳ್ಳಲಿದೆ. ಜಮೀನಿನ ಅಳತೆ ಕಾರ್ಯ ಪ್ರಕ್ರಿಯೆಯಲ್ಲಿದ್ದು, ಸಮಸ್ಯೆ ಇತ್ಯರ್ಥವಾಗಲಿದೆ. ಚುನಾವಣೆ ಮುಗಿದ ಬಳಿಕ ಅಂಗವಾಡಿಗೆ ಹೊಸ ಕಟ್ಟಡ ಹಾಗೂ ಉಡುತೊರೆ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು. ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಚುನಾವಣೆ ಬಹಿಷ್ಕಾರ ಸರಿಯಲ್ಲ ಎಂದು ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ಸಮ್ಮತಿ ಸೂಚಿಸಿದರು.