ಜಿಲ್ಲೆ

ನಾಗಠಾಣ ಕ್ಷೇತ್ರದಲ್ಲಿ ದೇವಸ್ಥಾನಗಳಿಗೆ ಭರಪೂರ ಕೊಡುಗೆ, ಶಾಸಕ ದೇವಾನಂದ ಚವಾಣ್ ಕಾರ್ಯಕ್ಕೆ ಮೆಚ್ಚುಗೆ, ಒಂದೇ ದಿನಕ್ಕೆ ನೀಡಿದ ಅನುದಾನ ಎಷ್ಟು ಗೊತ್ತಾ?

ವಿಜಯಪುರ: ಒಂದಲ್ಲ ಎರಡಲ್ಲ ಬರೋಬ್ಬರಿ 14 ಲಕ್ಷ ರೂಪಾಯಿ ಅನುದಾನವನ್ನು ಒಂದೇ ದಿನಕ್ಕೆ ಹಲವು ದೇವಸ್ಥಾನಗಳಿಗೆ ನೀಡುವ ಮೂಲಕ ಶಾಸಕ ದೇವಾನಂದ ಚವಾಣ್ ದೈವಭಕ್ತಿ ಮೆರೆದಿದ್ದಾರೆ.

ಶನಿವಾರ ನಾಗಠಾಣ ಕ್ಷೇತ್ರ ವ್ಯಾಪ್ತಿಯ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡಿ ಅಭಿಮಾನ ಮೆರೆದಿದ್ದಾರೆ. ಜಿಗಜೇವಣಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ರೂ.2ಲಕ್ಷ, ಟಾಕಳಿ ಗ್ರಾಮದ ಅಂಬಾಭವಾನಿ ದೇವಸ್ಥಾನಕ್ಕೆ ರೂ.5ಲಕ್ಷ, ಜೀರಂಕಲಗಿ ಗ್ರಾಮದ ಜೈಭವಾನಿ ದೇವಸ್ಥಾನಕ್ಕೆ ರೂ.4ಲಕ್ಷ ಹಾಗೂ ಮಣಂಕಲಗಿ ಗ್ರಾಮದ ಗೊಡ್ಯಾನತಾಯಿ ದೇವಸ್ಥಾನಕ್ಕೆ ರೂ.2ಲಕ್ಷ ರೂ. ಹಾಗೂ ಹಾವಿನಾಳ ಗ್ರಾಮದ ಕಲ್ಮೇಶ್ವರ ದೇವಸ್ಥಾನಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ.ಅನುದಾನ ನೀಡಿದ್ದಾರೆ.

ಚಡಚಣ ಪಟ್ಟಣದಲ್ಲಿರುವ ಶಿವಶರಣ ಹರಳಯ್ಯ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ದೇವಾನಂದ ಚವಾಣ್ ಬಳಿಕ ಆ ಸಮಾಜಕ್ಕೆ ನಿವೇಶನ ಹಂಚಿಕೆಗಾಗಿ ವೈಯಕ್ತಿಕವಾಗಿ 3.25 ಲಕ್ಷ ರೂ.ಅನುದಾನ ನೀಡಿದ್ದಾರೆ. ಶಾಸಕರ ಈ ಕಾಳಜಿಗೆ ಸಾರ್ವಜನಿಕರು ಅಭಿನಂದಿಸಿದ್ದು, ಭವ್ಯ ಮೆರವಣಿಗೆ, ಆರತಿ ಬೆಳಗಿ, ಸನ್ಮಾನಿಸಿ ಸತ್ಕರಿಸಿದ್ದಾರೆ.

ವಿರಕ್ತ ಮಠದ ಪರಮಪೂಜ್ಯ ಷಡಕ್ಷರ ಮಹಾಸ್ವಾಮಿಗಳು, ಆಲಮೇಲ ವಿರಕ್ತ ಮಠದ ಪರಮಪೂಜ್ಯ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಬಾಬುಗೌಡ ಪಾಟೀಲ, ಸಂಗಮೇಶ ಆವಜಿ, ಡಾ.ಸುನಿತಾ ದೇವಾನಂದ ಚವಾಣ್, ಮುರ್ತುಜಾ ನದಾಪ, ಕಾಂತುಗೌಡ ಪಾಟೀಲ ಮತ್ತಿತರರು ಇದ್ದರು.