ಎಚ್.ಡಿ.ಕೋಟೆ: ದೇಶವನ್ನು ಮುನ್ನಡೆಸಬೇಕಾದ ಯುವ ಜನತೆ ನಶೆಯಲ್ಲಿ ತೇಲಾಡುವಂತಾಗಿರುವುದು ದುರದೃಷ್ಟಕರ ಸಂಗತಿ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಧೀಶರೂ ಆದ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಂದೇಶ್ ಪ್ರಭು ತಿಳಿಸಿದರು.
ಪಟ್ಟಣದ ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜು ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆ ಮತ್ತು ಮಾದಕ ವ್ಯಸನದ ಬಲುಪಶುಗಳಿಗೆ ಕಾನೂನು ಸೇವೆಗಳು ಹಾಗೂ ಮಾದಕ ವ್ಯಸನದ ನಿರ್ಮೂಲನೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಆದರೆ, ಅಂಗಡಿಗಳಲ್ಲಿ ಚಾಕಲೇಟ್ ಖರೀದಿಸುವ ಹಾಗೆ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ದೂರವಿದ್ದು ಜೀವನ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಧೀಶ ಎಸ್.ಎನ್.ಸುರೇಶ್ ಮಾತನಾಡಿ, ಭೂಮಿಯನ್ನು ಸಂರಕ್ಷಣೆ ಮಾಡುವ ಕುರಿತು ಮಾಹಿತಿ ನೀಡಿದರು. ಎನ್‌ಡಿಪಿಎಸ್ ಆಕ್ಟ್ 1985ರ ಕುರಿತು ಕಾನೂನು ಅರಿವು ಮೂಡಿಸಿದರು.
2ನೇ ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸುಷ್ಮಾ ಮಾತನಾಡಿ, ಮದ್ಯ ವ್ಯಸನದಿಂದ ಮಕ್ಕಳು ಹಾಳಾಗಬೇಡಿ. ನಿಮಗಾಗಿ ಪಾಲಕರು ತುಂಬಾ ಕಷ್ಟಪಡುತ್ತಾರೆ. ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಯುವ ಪೀಳಿಗೆ ಆತ್ಮಹತ್ಯೆ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಮಣಿ ರಾಜು, ಹಿರಿಯ ವಕೀಲ ಸಂಗಮೇಶ್ವರ, ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರಸ್ವಾಮಿ, ಪ್ರಾಧ್ಯಾಪಕರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸರು, ವಿದ್ಯಾರ್ಥಿಗಳು ಹಾಜರಿದ್ದರು.