ಜಿಲ್ಲೆ

ನವೋದ್ಯಮ ಸ್ಥಾಪನೆಯತ್ತ ಗಮನ ಹರಿಸಿ

ಮೈಸೂರು: ಯುವ ಜನರು ನವೋದ್ಯಮ ಸ್ಥಾಪನೆ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಉದ್ಯಮಿ ಜಿ.ಕೆ. ಬಾಲಕೃಷ್ಣನ್ ಹೇಳಿದರು.
ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್ ರೆಫ್ರಿಜರೇಟಿಂಗ್ ಆ್ಯಂಡ್ ಏರ್ ಕಂಡೀಷನಿಂಗ್ ಇಂಜಿನಿಯರ್ಸ್ (ಐಎಸ್‌ಎಚ್‌ಆರ್‌ಎಇ) ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ದಿಶಾ 2.0 ಊರ್ಜಾವರಣ್ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ನವ ಸಂಶೋಧನೆ, ತಂತ್ರಜ್ಞಾನ, ತಾಂತ್ರಿಕತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಜನರು ಕಾರ್ಯೋನ್ಮುಖವಾಗಬೇಕು. ಸುರಕ್ಷಿತವಾದ ಸರ್ಕಾರಿ ಕೆಲಸ ಪಡೆಯಲು ಹಾಕುವ ಶ್ರಮವನ್ನು ಹೊಸ ಉದ್ದಿಮೆ ಸ್ಥಾಪನೆಗೆ ವಿನಿಯೋಗಿಸಬೇಕು. ಇದರಿಂದ ಹಲವರಿಗೆ ಕೆಲಸ ಕೊಡಬಹುದು. ಆರ್ಥಿಕ ಅಭಿವೃದ್ಧಿಗೂ ನೆರವಾಗಬಹುದಾಗಿದೆ ಎಂದರು.

ಈಗ ಹಣ ಮುಖ್ಯವಲ್ಲ. ದುಡಿಮೆಯೇ ಮುಖ್ಯ. ಕೆಲಸ ಮಾಡಿದರೆ ಹಣ ಹಿಂಬಾಲಿಸಿಕೊಂಡು ಬರಲಿದೆ. ಹಣದ ಹಿಂದೆ ಓಡಿದರೆ, ಜೀವನ ಹಾಳಾಗಲಿದೆ. ಈ ವಾಸ್ತವಿಕತೆಯನ್ನು ಯುವ ಜನರು ಅರ್ಥೈಸಿಕೊಳ್ಳಬೇಕು. ಯಶಸ್ಸು ದುಡಿಮೆಯನ್ನು ಹಿಂಬಾಲಿಸುತ್ತದೆ. ಒಳ್ಳೆಯ ಕನಸುಗಳನ್ನು ನನಸಾಗಿಸಲು ಕಾರ್ಯೋನ್ಮುಖರಾಗಬೇಕು ಎಂದರು.


ಐಎಸ್‌ಎಚ್‌ಆರ್‌ಎಇ ಮೈಸೂರು ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ನಾಡಿಗೇರ್ ಮಾತನಾಡಿ, ಪರಿಸರ ಸ್ನೇಹಿಯಾದ ಅಭಿವೃದ್ಧಿ ಕಾರ್ಯಯೋಜನೆ ಹಾಕಿಕೊಳ್ಳಬೇಕಿದೆ. ಪ್ರಗತಿ ಎಂದರೆ ಪರಿಸರ ನಾಶವಲ್ಲ. ಅದು ಇದಕ್ಕೆ ಪೂರಕವಾಗಬೇಕು. ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬೇಕಿದೆ. ಹೀಗಾಗಿಯೇ ಊರ್ಜಾವರಣ್ ಸಮ್ಮೇಳನ ಆಯೋಜಿಸಲಾಗಿದೆ ಎಂದರು.


ರಂಗರಾವ್ ಆ್ಯಂಡ್ ಸನ್ಸ್ ನಿರ್ದೇಶಕ ವಿಷ್ಣುರಂಗ, ಬಾಬಾ ಅಣು ಸಂಶೋಧನಾ ಕೇಂದ್ರದ ಅರನಿ ಶ್ರೀನಿವಾಸ್, ಟಿ.ಎ.ಪ್ರಭಾಕರ್, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಡಾ.ಎಸ್.ಎ. ಮೋಹನ್ ಕೃಷ್ಣ ಇದ್ದರು.