ಮೇಲುಕೋಟೆ: ಖ್ಯಾತ ಕವಿ ಪುತಿನ ಆಶಯದಂತೆ ಮೇಲುಕೋಟೆಯಲ್ಲಿ ರಂಗಮಂದಿರ ನಿರ್ಮಾಣಮಾಡಲಾಗಿದೆ ಎಂದು ಖ್ಯಾತ ರಂಗಕರ್ಮಿ ರಾಜಾರಾಂ ತಿಳಿಸಿದರು.
ಅವರು ಇತ್ತೀಚೆಗೆ ನವೀಕೃತಗೊಂಡ ಪುತಿನ ಕಲಾಮಂದಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪುತಿನ ಹತ್ತು ಹಲವು ವೈಶಿಷ್ಟೃಗಳನ್ನೊಳಗೊಂಡ ಕವಿಗಳಾಗಿದ್ದು, ನವೋದಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಗೀತರೂಪಕಗಳು ಇಂದಿಗೂ ಅದ್ವಿತೀಯವಾಗಿವೆ. ಕರ್ನಾಟಕ ಸರ್ಕಾರ ಕವಿ ಬದುಕ್ಕಿದ್ದಾಗಲೇ ಅವರ ಸಾಹಿತ್ಯ ಕೃಷಿಯನ್ನು ನಾಡಿನಾದ್ಯಂತ ಪಸರಿಸಲು ಪುತಿನ ಟ್ರಸ್ಟ್ ಆರಂಭಿಸಿತು.
ಟ್ರಸ್ಟ್ ಪ್ರಥಮ ಅಧ್ಯಕ್ಷ ಕವಿ ಡಾ. ಶಿವರುದ್ರಪ್ಪ ಮುಂದಾಳತ್ವದಲ್ಲಿ ಜಿಲ್ಲೆಯಲ್ಲೇ ಮಾದರಿಯಾದ ರಂಗಮಂದಿರ ನಿರ್ಮಾಣಮಾಡಲಾಯಿತು. ಪುತಿನ ಹಲವು ಕೃತಿಗಳು ಲೋಕಾರ್ಪಣೆಗೊಂಡವು. ರಾಜ್ಯಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇದೀಗ ರಂಗಮಂದಿರವನ್ನು ಖ್ಯಾತಕವಿ ಹೆಚ್.ಎಸ್ ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನವೀಕರಣಮಾಡಲಾಗಿದೆ. ಇದೇ ವೇಳೆ ಪುತಿನ ರಚನೆಯ ‘ಅರಿವು ಇರವುಗಳ ಸನ್ನೈಗೈ- ಮಲೆದೇಗುಲ’ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.
ಪುತಿನ ಮೊಮ್ಮಗ ಎಂ.ಎಸ್. ಶ್ರೀನಾಥ್, ಟ್ರಸ್ಟ್ ಕಾರ್ಯದರ್ಶಿ ಎಚ್.ವಿ.ರವೀಶ್, ಅನಂದರಾಂ ಉಪಾಧ್ಯ, ಪತ್ರಕರ್ತ ಕೆ.ಎನ್ ರವಿ, ವ್ಯವಸ್ಥಾಪಕ ಸಂಜಯ್, ಸಾಹಿತಿ ಎಸ್.ಎನ್. ಸಿಂಹ, ಸಾಹಿತಿ ನಾಗರತ್ನ ಹೆಮ್ಮಿಗೆ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಸಂತಾನರಾಮನ್, ಮೇಲುಕೋಟೆ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ಇತರರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಪುತಿನ ಟ್ರಸ್ಟ್ ಅಧ್ಯಕ್ಷ ಡಾ.ಹೆಚ್‌ಎಸ್‌ವಿ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಅವರೇ ರಚಿಸಿದ ಅನುವಾದದ ‘ಮುದಿದೊರೆ ಮತ್ತು ಮೂವರು ಮಕ್ಕಳು’ ನಾಟಕ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.