ಜಿಲ್ಲೆ

ನವೆಂಬರ್ 11ರಿಂದ ಕಿಸಾನ್ ಸ್ವರಾಜ್ ಸಮ್ಮೇಳನ

ಮೈಸೂರು: ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ನವೆಂಬರ್ 11ರಿಂದ ಮೂರು ದಿನಗಳವರೆಗೆ ಮುಕ್ತಗಂಗೋತ್ರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.


ಸಮ್ಮೇಳನದಲ್ಲಿ ಬೀಜ ಉತ್ಸವ, ಸಾವಯವ ಪ್ರದರ್ಶನ, ವಿಚಾರ ಸಂಕಿರಣ, ಚರ್ಚೆ ಹಾಗೂ ಉಪನ್ಯಾಸಗಳು ನಡೆಯಲಿವೆ. ದೇಶದ 15ಕ್ಕೂ ಹೆಚ್ಚು ರಾಜ್ಯಗಳಿಂದ ಅಂದಾಜು 1,500 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತಕ ಕೃಷಿ ವಲಯ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆ ಮತ್ತು ಅಲ್ಲಲ್ಲಿ ಕಂಡುಕೊಂಡಿರುವ ಸುಸ್ಥಿರ ಪರಿಹಾರೋಪಾಯ ಮಾರ್ಗಗಳನ್ನು ಒಂದೇ ವೇದಿಕೆಗೆ ತರುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ವಿವರಿಸಿದರು.


ಹಲವು ಕಾರಣಗಳಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಭೂಮಂಡಲ ಬಿಸಿಯಾಗುತ್ತಿದ್ದು, ಎಲ್ಲ ದೇಶಗಳೂ ಈ ಬಿಕ್ಕಟ್ಟಿನ ಬಗ್ಗೆ ಚಿಂತನೆ ನಡೆಸಲು ಮುಂದಾಗಿವೆ. ಹೀಗಾಗಿ ಪರಿಸರ ಸ್ನೇಹಿ ಕೃಷಿ, ನಿಸರ್ಗದ ಸಂರಕ್ಷಣೆಯಂತಹ ಕ್ರಮ ಅನುಸರಿಸುವ ಮೂಲಕ ಜಾಗತಿಕ ತಾಪಮಾನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ. ಇಂಥ ಹತ್ತು ಹಲವರು ವಿಧಾನಗಳನ್ನು ಕಿಸಾನ್ ಸ್ವರಾಜ್ ಸಮ್ಮೇಳನ ಪ್ರತಿಪಾದಿಸಲಿದೆ ಎಂದು ಮಾಹಿತಿ ನೀಡಿದರು.


ವೇತನದಾರರು 3,500 ರೂ., ಪುರುಷ ರೈತರು, ಪತ್ರಕರ್ತರು, ಸ್ವಯಂ ಸೇವಾ ಪ್ರತಿನಿಧಿಗಳು 2,500 ರೂ., ಪೂರ್ಣಾವಧಿ ರೈತರು 1,500 ರೂ., ಮಹಿಳಾ ರೈತರು 800 ರೂ., ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾಹಿತಿಗೆ ಮೊ: 99005 37434 ಸಂಪರ್ಕಿಸಬಹುದು ಎಂದು ತಿಳಿಸಿದರು.