ಮೈಸೂರು: ಔಷಧೀಯ ವಿಜ್ಞಾನಿಗಳು ನವೀನ ಔಷಧಗಳ ಚಿಕಿತ್ಸಕ ತಂತ್ರಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಜಮ್ಮು ಮತ್ತು ಭೋಪಾಲ್‌ನ ಏಮ್ಸ್‌ನ ಅಧ್ಯಕ್ಷ ಡಾ.ವೈ.ಕೆ.ಗುಪ್ತಾ ಹೇಳಿದರು.
ನಗರದ ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 52ನೇ ರಾಷ್ಟ್ರೀಯ ಔಷಧೀಯ ಸಂಘಟನೆಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಔಷಧ ವಿಜ್ಞಾನ ಶಿಕ್ಷಣವು ಸಾರ್ವಜನಿಕ ಆರೋಗ್ಯದ ಅಗತ್ಯತೆಯನ್ನು ಪೂರೈಸಬೇಕು. ಸಮರ್ಥ ವೃತ್ತಿಪರ ಔಷಧಿಕಾರರನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಔಷಧಗಳ ಪರಿಣಾಮ, ಜವಾಬ್ದಾರಿಯುತ ಬಳಕೆಯನ್ನು ಖಾತ್ರಿ ಪಡಿಸುವಲ್ಲಿ ಸಹ ಔಷಧಕಾರರು ಪ್ರಮುಖ ಹೊಣೆಗಾರಿ ಹೊಂದಿದ್ದಾರೆ ಎಂದರು.
ಔಷಧಿಕಾರರು ಔಷಧಗಳ ಬಳಕೆಯ ಮೇಲ್ವಿಚಾರಣೆ, ರೋಗಿಗಳಿಗೆ ಔಷಧ ಕಟ್ಟುಪಾಡುಗಳನ್ನು ಅನುಸರಿಸಲು ಮತ್ತು ಔಷಧಗಳನ್ನು ಜವಾಬ್ದಾರಿಯುತವಾಗಿ ಬಳಸಲು ಬೆಂಬಲಿಸಬೇಕು ಎಂದರು.
ರಾಂಚಿ ಪಶುವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಬಿ.ಕೆ.ರಾಯ್ ಮಾತನಾಡಿ, ಆಯುರ್ವೇದ ವೈದ್ಯರು, ವೈದ್ಯರು ಮತ್ತು ಔಷಧೀಯರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ಕೈಜೋಡಿಸಬೇಕಾಗಿದೆ. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ನೆರವಾಗಲಿದೆ ಎಂದರು.
ಔಷಧ ಅನ್ವೇಷಣೆ, ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಪ್ರಸಿದ್ಧ ಔಷಧಶಾಸ್ತ್ರರಾದ ಡಾ.ವೈ.ಕೆ.ಗುಪ್ತಾ, ಡಾ.ಬಿ.ಕೆ.ರಾಯ್ ಮತ್ತು ನವದೆಹಲಿಯ ಡಿಪಿಎಸ್‌ಆರ್‌ಯು ಕುಲಪತಿ ಡಾ.ಆರ್.ಕೆ.ಗೋಯಲ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
10 ಜನ ಶಿಕ್ಷಕರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ನೀಡಲಾಯಿತು. ನಾಲ್ವರು ಔಷಧಶಾಸ್ತ್ರಜ್ಞರಿಗೆ ‘ಫೆಲೋ ಆಫ್ ಇಂಡಿಯನ್ ಫಾರ್ಮಾಕೊಲಾಜಿಕಲ್ ಸೊಸೈಟಿ’ ನೀಡಲಾಯಿತು. 8 ಸಂಶೋಧಕರು ಸಮ್ಮೇಳನದ ಸಮಯದಲ್ಲಿ ಭಾಷಣ ಮಾಡಿದರು.
ಜೆಎಸ್‌ಎಸ್ ಎಎಚ್‌ಇಆರ್‌ನ ಕುಲಸಚಿವ ಡಾ.ಬಿ.ಮಂಜುನಾಥ್, ಇಂಡಿಯನ್ ಫಾರ್ಮಾಕೊಲಾಜಿಕಲ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಕಲಾಕುಮಾರ್, ಅಧ್ಯಕ್ಷ ಡಾ.ಶಿವಪ್ರಕಾಶ್ ರತ್ನಂ ಇನ್ನಿತರರು ಪಾಲ್ಗೊಂಡಿದ್ದರು