ಜಿಲ್ಲೆ

ನವಿಲುತೀರ್ಥದಿಂದ ನೀರು ಬಿಡುವ ಸಾಧ್ಯತೆ

ಗದಗ, ಸಂಭಾವ್ಯ ನೆರೆ ಅನಾಹುತ, ಜಾಗ್ರತೆ, ಅಧಿಕಾರಿಗಳು, ಸಚಿವ ಸಿ.ಸಿ. ಪಾಟೀಲ ಸೂಚನೆ,

ಗದಗ: ಅಧಿಕ ಮಳೆಯಿಂದಾಗಿ ನವಿಲುತೀರ್ಥ ಡ್ಯಾಂ ಭರ್ತಿಯಾಗಿದೆ. ಯಾವುದೇ ಕ್ಷಣದಲ್ಲಿ ನೀರನ್ನು ಹರಿಬಿಡುವ ಸಂದರ್ಭ ಎದುರಾಗಬಹುದು. ರೋಣ ಹಾಗೂ ನರಗುಂದ ತಹಸೀಲ್ದಾರರು ನೀರಾವರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಭಾವ್ಯ ನೆರೆ ಅನಾಹುತದ ಬಗ್ಗೆ ಎಚ್ಚರವಹಿಸಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು..

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಕೃತಿ ವಿಕೋಪ , ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆ, ಮನೆ ಹಾಗೂ ಸರ್ಕಾರಿ ಆಸ್ತಿಗಳ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದು ಮಾತನಾಡಿದರು. ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುತ್ತಿದ್ದ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಅಧಿಕಾರಿಗಳು ಸ್ಥಳ ಗುರುತಿಸಿ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಪ್ರಸಕ್ತ ಸಾಲಿನ ಪ್ರವಾಹಕ್ಕೆ ಜಿಲ್ಲೆಯ 8,293 ಹೆಕ್ಟೇರ್ ಕೃಷಿ ಬೆಳೆ ಹಾಳಾಗಿದ್ದು, 9.36 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ. 34ರಷ್ಟು ಅಧಿಕ ಮಳೆಯಾಗಿದ್ದು 3 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಶೇ. 98.4 ರಷ್ಟು ಸಾಧನೆಯಾಗಿದೆ ಎಂದು ವಿವರಿಸಿದರು.

ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ 38 ಸಾವಿರ ಮೆಟ್ರಿಕ್ ಟನ್ ಮಾರಾಟವಾಗಿದ್ದು ಸದ್ಯ 7 ಸಾವಿರ ಮೆಟ್ರಿಕ್ ಟನ್ ದಾಸ್ತಾನಿದೆ. ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಪೂರೈಕೆಯಲ್ಲಿ ಅಲ್ಪಮಟ್ಟಿಗೆ ಕೊರತೆಯಾಗಿದ್ದು ಸೂಕ್ತ ಕ್ರಮ ವಹಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 1.25 ಲಕ್ಷ ರೈತರು ಕಂತು ಪಾವತಿಸಿದ್ದು ರಾಜ್ಯದಲ್ಲಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಫಸಲ್ ಬಿಮಾ ಕಂತು ಪಾವತಿಸಲು ಆ. 16 ಕೊನೆಯ ದಿನವಾಗಿದೆ ಎಂದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಬಿರಾದಾರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 37,382 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಶೇ. 99.73ರಷ್ಟು ಗುರಿಗೆ ಸಾಧನೆಯಾಗಿದೆ. 303.66 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದ ತೋಟಗಾರಿಕಾ ಬೆಳೆ ಹಾಳಾಗಿದ್ದು, ಅಂದಾಜು 46 ಲಕ್ಷ ರೂ. ಹಾನಿಯಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಪ್ರಸಕ್ತ ಸಾಲಿನ ಮಳೆ ಹಾಗೂ ಪ್ರವಾಹಕ್ಕೆ ಜಿಲ್ಲೆಯ 365 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಎನ್​ಡಿಆರ್​ಎಫ್ ಹಾಗೂ ಎಸ್​ಡಿ ಆರ್​ಎಫ್ ಮಾರ್ಗಸೂಚಿಗಳನ್ವಯ ಹಾನಿಯಾದ ಮನೆಗಳಿಗೆ 13.06 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನ ಪ್ರವಾಹ, ಮಳೆಯಿಂದಾಗಿ 312.82 ಕಿ.ಮೀ ರಸ್ತೆ ಹಾನಿಯಾಗಿದೆ. 96 ಸೇತುವೆಗಳು ಹಾಳಾಗಿದ್ದು, 190 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಇದರಲ್ಲಿ 12.85 ಕೋಟಿ ರೂ. ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಸದಾನಂದ ವಿವರಿಸಿದರು. ಜಿಲ್ಲಾಧಿಕಾರಿ ಸುಂದರೇಶ್ ಬಾಬು ಮಾತನಾಡಿದರು.

ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಮಾತನಾಡಿದರು. ಸಭೆಯಲ್ಲಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸಿಇಒ ಭರತ ಎಸ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇತರರು ಉಪಸ್ಥಿತರಿದ್ದರು.

100 ಬೆಡ್ ಆಸ್ಪತ್ರೆ ಮಂಜೂರು

ಜಿಲ್ಲೆಗೆ 100 ಬೆಡ್​ಗಳ ಆಸ್ಪತ್ರೆ ಮಂಜೂರಾಗಿದೆ. ಜಿಮ್ಸ್​ನಲ್ಲಿ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಮಾತನಾಡಿ, 3,67,517 ಜನರಿಗೆ ಮೊದಲ ಲಸಿಕೆ ನೀಡುವ ಮೂಲಕ ಶೇ. 46ರಷ್ಟು, 1,24,633 ಜನರಿಗೆ ಎರಡನೇ ಡೋಸ್ ಲಸಿಕೆ ನೀಡುವ ಮೂಲಕ ಶೇ 33.9 ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ಪ್ರವಾಹಕ್ಕೆ ತುತ್ತಾದ ಜಿಲ್ಲೆಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕು. ಸದ್ಯ ಇರುವ ಅನುದಾನದಲ್ಲಿಯೇ ಕಾಮಗಾರಿ ಕೈಗೊಳ್ಳಬೇಕು. ಲೋಕೋಪಯೋಗಿ ಇಲಾಖೆಯ ಹೊಣೆಗಾರಿಕೆ ನೀಡಿರುವುದರಿಂದ ಸಾರ್ವಜನಿಕರ ನಿರೀಕ್ಷೆ ಅಧಿಕವಾಗಿದೆ. ನಿರೀಕ್ಷೆಗೆ ತಕ್ಕಂತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.| ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವ