ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ಸ್ವಾಮಿಯ ಸನ್ನಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಇದಕ್ಕೆ ಸರ್ಕಾರದ ಅನುದಾನ ಮಾತ್ರವಲ್ಲದೆ ಭಕ್ತಾದಿಗಳ ನೆರವನ್ನು ಕೂಡ ಪಡೆಯಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನವರಾತ್ರಿಯ ಮೊದಲ ದಿನವಾದ ಸೋಮವಾರ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾತೃಹತ್ಯಾದೋಷವನ್ನು ನಿವಾರಿಸಿದ ತುಂಗಾ ನದಿದಡದ ಈ ಪುಣ್ಯಕ್ಷೇತ್ರವನ್ನು ಮುಂದಿನ ತಲೆಮಾರಿಗೆ ಮಾದರಿಯಾಗಿ ನವೀಕರಿಸಬೇಕಿದೆ. ದೇವರ ಗರ್ಭಗುಡಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಸುತ್ತಲಿನ ಚಂದ್ರಶಾಲೆ ಮತ್ತು ಆಕರ್ಷಕವಾದ ಮುಖಮಂಟಪದ ನಿರ್ಮಾಣವಾಗಬೇಕಿದೆ ಎಂದರು.
ಧಾರ್ಮಿಕ ದತ್ತಿ ಇಲಾಖೆಯಲ್ಲಿ ಭಕ್ತರ ಕಾಣಿಕೆಯಿಂದಲೇ ಸಂಗ್ರಹವಾಗಿರುವ 35 ಲಕ್ಷ ರೂ.ಹಣ ಇದೆ. ಈ ಹಣವನ್ನು ಆರಂಭಿಕ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ತಾಲೂಕಿನಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಶ್ರೀ ರಾಮೇಶ್ವರ ದೇವರ ಅಪಾರ ಭಕ್ತರಿದ್ದು ಅವರೆಲ್ಲರ ನೆರವನ್ನು ಕೂಡ ಕೋರಲಾಗುವುದು ಎಂದು ಹೇಳಿದರು.