ಬಾಗಲಕೋಟೆ: ಸರಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ನವನಗರದ ಬಸ್ ನಿಲ್ದಾಣದಲ್ಲಿ ಸಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಲಾಯಿತು.
ಸೋಮವಾರ ನವನಗರದ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಮಹಿಳಾ ಪ್ರಯಾಣಿಕರ ಸಂಭ್ರಮಾಚರಣೆ ಅಂಗವಾಗಿ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್.ಮೇಟಿ ಶೃಂಗಾರಗೊಂಡ ಬಸ್‍ಗೆ ಪೂಜೆ ಸಲ್ಲಿಸಿ ನೆರೆದ ಮಹಿಳಾ ಪ್ರಯಾಣಿಕರಿಗೆ ಹೂಗುಚ್ಚ ನೀಡಿ, ನಂತರ ಸಿಹಿ ಹಂಚಿದರು. ನಂತರ ಮಹಿಳಾ ಪ್ರಯಾಣಿಕರಿಗೆ ಶಾಸಕರು ಬಸ್ ಟಿಕೇಟ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ವಾಯ್.ಮೇಟಿ ಅವರು ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮಹತ್ವದ ಯೋಜನೆಯಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು 500 ಕೋಟಿ ಮಹಿಳೆಯರು ಬಸ್‍ನಲ್ಲಿ ಪ್ರಯಾಣ ಮಾಡಿದ್ದಾರೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳು ಮುಂದುವರೆಯಲಿವೆ. ಈ ಯೋಜನೆಗೆ ಜೂನ್ 11, 2023 ರಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದರೆ ಎಂದು ತಿಳಿಸಿದರು.
ಶಕ್ತಿ ಯೋಜನೆಯ ಅನುಷ್ಠಾನದ ನಂತರ ಜಿಲ್ಲೆಯ ಬಸ್‍ಗಳಲ್ಲಿ ಪ್ರತಿ ದಿನ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶಕ್ತಿ ಯೋಜನೆಯ ಮುಂಚಿತವಾಗಿ ಇದ್ದ 2.71 ಲಕ್ಷದಿಂದ 3.04 ಲಕ್ಷಕ್ಕೆ ಏರಿಕೆಯಾಗಿದೆ. ಜೂನ್ 11, 2023 ರಿಂದ ಇಲ್ಲಿಯವರೆಗೆ 764 ದಿನಗಳನ್ನು ಪೂರೈಸಿದೆ. ಬಾಗಲಕೋಟೆ ವಿಭಾಗದಲ್ಲಿ 14 ಕೋಟಿ 26 ಲಕ್ಷ 44 ಸಾವಿರ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದರಿಂದ 462 ಕೋಟಿ 47 ಲಕ್ಷ 77 ಸಾವಿರ ರೂ.ಗಳ ಆದಾಯ ಸಂಗ್ರಹವಾಗಿದೆ ಎಂದರು.
ಬಾಗಲಕೋಟೆ ವಿಭಾಗದಲ್ಲಿ ಪ್ರತಿದಿನ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸರಾಸರಿ ಸಂಖ್ಯೆ 3 ಲಕ್ಷ 3 ಸಾವಿರ ಇದ್ದು, ಒಟ್ಟ ಪ್ರಯಾಣಿಕರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಪ್ರತಿದಿನ 1 ಲಕ್ಷ 87 ಸಾವಿರ ಇದೆ. ಒಟ್ಟು ಪ್ರಯಾಣಿಕರಲ್ಲಿ ಶೇ.61 ರಷ್ಟು ಮಹಿಳಾ ಪ್ರಯಾಣಿಕರು ಇದ್ದಾರೆ. ಬಾಗಲಕೋಟೆ ವಿಭಾಗವು ಪ್ರತಿದಿನ ಸರಾಸರಿ 1.10 ಕೋಟಿ ರೂ.ಗಳ ಆದಾಯ ಗಳಿಸುತ್ತಿದೆ. ಒಟ್ಟು ಆದಾಯದಲ್ಲಿ ಶಕ್ತಿ ಯೋಜನೆಯ ಪಾಲು ಶೇ.55 ರಷ್ಟು ಇರುತ್ತದೆ. ಶಕ್ತಿ ಯೋಜನೆ ಪ್ರಾರಂಭವಾದ ನಂತರ ಸಾರಿಗೆ ಆದಾಯದಲ್ಲಿ ಪ್ರತಿದಿನ ಸರಾಸರಿ 30 ಲಕ್ಷದಷ್ಟು ಹೆಚ್ಚಳವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಪ್ರಾಧಿಕಾರದ ಅಧ್ಯಕ್ಷ ಎಸ್.ಎಚ್.ತೆಕ್ಕೆನ್ನವರ, ತಾಲೂಖಾ ಮಟ್ಟದ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ರಾಂಪೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ವಾ.ಕ.ರ.ಸಾ.ಸಂಸ್ಥೆಯ ಜಿಲ್ಲಾ ಸಂಚಾರಿ ಅಧಿಕಾರಿ ಕೆ.ಕೆ.ಲಮಾಣಿ, ಸಹಾಯಕ ಸಂಚಾರ ಅಧೀಕ್ಷಕ ಕಲ್ಲೊಳ್ಳೆಪ್ಪ ಕಳ್ಳೇನ್ನವರ, ಬಾಗಲಕೋಟೆ ಡಿಪೋ ಮ್ಯಾನೇಜರ ಕೃಷ್ಣಪ್ಪ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.