ಹುಬ್ಬಳ್ಳಿ: ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆೆ ಪೂರ್ಣ ಪ್ರಮಾಣದ ಸಂಶೋಧನಾ ಕೇಂದ್ರ ಒದಗಿಸಲು ಸಹಕಾರ ನೀಡಲಾಗುವುದು. ಸಿಎಸ್ಆರ್ ಫಂಡ್ನಿಂದ 5 ಕೋಟಿ ರೂ. ಕೊಡಿಸಲಾಗುವುದು. ಸರ್ಕಾರಿ ಬೆಂಬಲಿತ ಆಸ್ಪತ್ರೆ ಎಂದು ಪರಿಗಣಿಸಿ ಇಲ್ಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆಯುಷ್ಮಾನ್ ಕಾರ್ಡ್ ರೋಗಿಗಳನ್ನು ರೆಫರ್ ಮಾಡಲು ತಕ್ಷಣವೇ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವನಗರದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಂಗಳವಾರ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು ನವೀಕರಣಗೊಂಡ ಭಾನಜಿ ಡಿ. ಖಿಮಜಿ ಒಪಿಡಿ ಬ್ಲಾಕ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ಕಾಯಿಲೆಗೆ ಹರ್ಬಲ್ ಚಿಕಿತ್ಸೆ ನೀಡುವ ಬಗ್ಗೆ ಸಂಶೋಧನೆಗಳು ಆಗಬೇಕು. ಇದಕ್ಕಾಗಿ ಕ್ಯಾನ್ಸರ್ ಆಸ್ಪತ್ರೆಗೆ ಸಹಾಯ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ಜಯದೇವ ಸಂಸ್ಥೆಗೆ ಮುಂದಿನ ತಿಂಗಳು ಭೂಮಿಪೂಜೆ ಮಾಡಲಾಗುವುದು. ಇನ್ನೂ ಬೇಕಾದ ಹಣಕಾಸಿನ ಸವಲತ್ತು ನೀಡಲಾಗುವುದು ಎಂದು ತಿಳಿಸಿದರು.
ಕ್ಯಾನ್ಸರ್ ರೋಗ ಬಂತೆಂದು ಯಾರೂ ಭಯ ಪಡಬೇಕಾಗಿಲ್ಲ, ಅವರ ಕುಟುಂಬದವರು ಹತಾಶರಾಗಬಾರದು, ವೈದ್ಯಕೀಯ ವಿಜ್ಞಾನದಲ್ಲಿ ನಂಬಿಕೆ ಇಡಿ, ಯಾವುದೇ ಕಾಯಿಲೆ ಇದ್ದರೂ ಅದನ್ನು ಗುಣಪಡಿಸುವ ಸೌಲಭ್ಯಗಳು ಬಂದಿವೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಡಾ. ಆರ್.ಬಿ. ಪಾಟೀಲ ಅವರು ಬಡವರಿಗಾಗಿಯೇ ಸಹೃದಯಿ ಮಿತ್ರರನ್ನು ಕರೆದುಕೊಂಡು ಕ್ಯಾನ್ಸರ್ ಆಸ್ಪತ್ರೆ ಕಟ್ಟಿ ಬೆಳೆಸಿದರು. ಇವರ ಸೇವೆ ಪರಿಗಣಿಸಿ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದೆ. ಆಸ್ಪತ್ರೆಯ ಮೂಲ ಉದ್ದೇಶ ಯಾವುದೇ ಕಾರಣಕ್ಕೂ ಬದಲಾಗಬಾರದು ಎಂದು ಹೇಳಿದರು.
ಬೇಸಿಕ್ ಲ್ಯಾಬ್: ಆಸ್ಪತ್ರೆ ಆಡಳಿತ ಮಂಡಳಿ ಚೇರ್ಮನ್ ಡಾ. ಬಿ.ಆರ್. ಪಾಟೀಲ್ ಮಾತನಾಡಿ, ಆಸ್ಪತ್ರೆ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಸರ್ಕಾರದ ಅನುದಾನ ಬಳಕೆಯ ವಿವರ ಸಲ್ಲಿಸಿದರು. ಆಸ್ಪತ್ರೆಗೆ ಸುಮಾರು 5 ಕೋಟಿ ರೂ. ವೆಚ್ಚದ ಬೇಸಿಕ್ ಸೈನ್ಸ್ ಲ್ಯಾಬ್ ಅಗತ್ಯವಿದೆ. ರೋಗದ ಬಗ್ಗೆ ಅರಿವು ಮೂಡಿಸಲು ಜಾಗೃತಿ ವಾಹನ ಸಿದ್ಧಪಡಿಸುವ ಆಶಯವಿದೆ ಎಂದು ಹೇಳಿದರು.
ಸಂಸ್ಥೆ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅವರ ಸಹಕಾರ ಬಹಳಷ್ಟಿದೆ. ನಮ್ಮ ಸಂಸ್ಥೆಯ ಗಾಡ್ ಫಾದರ್ ಅವರು. ಅನಿವಾರ್ಯ ಕಾರಣದಿಂದ ಬಂದಿಲ್ಲ. ಸಂದೇಶ ಕಳುಹಿಸಿ ಶುಭ ಕೋರಿದ್ದಾರೆ. ಈ ದಿಸೆಯಲ್ಲಿ ನಿರಂತರ ಸಹಕಾರ ನೀಡುತ್ತಿರುವ ಆಡಳಿತ ಮಂಡಳಿ ಸದಸ್ಯರೂ ಅಭಿನಂದನಾರ್ಹರು ಎಂದರು.
ಚೆಕ್ ವಿತರಣೆ: ರೇಡಿಯೋಥೆರಪಿ ಮಶಿನ್ ಒದಗಿಸಿದ ಪನೇಶಿಯಾ ಕಂಪನಿಯ ಪಲ್ಲವಿ ಅವರಿಗೆ 5.5 ಕೋಟಿ ರೂ. ಹಾಗೂ ಅತ್ಯಾಧುನಿಕ ಸಿಟಿ ಸ್ಕಾ್ಯನ್ ಮಶೀನ್ ಪೂರೈಸಿದ ತೋಷಿಬಾ ಕಂಪನಿಯ ಸೋವಿರಾಜನ್ ಅವರಿಗೆ 1.4 ಕೋಟಿ ರೂ. ಚೆಕ್ ಅನ್ನು ಸಿಎಂ ಹಸ್ತಾಂತರ ಮಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ, ಮೇಯರ್ ಈರೇಶ ಅಂಚಟಗೇರಿ, ಪದ್ಮಶ್ರೀ ಡಾ. ಎಂ.ಎಂ. ಜೋಶಿ, ಯಮನಕ್ಕ ಪಾಟೀಲ, ಕಾರ್ಯದರ್ಶಿ ಡಾ. ಸುಭಾಷ ಬೆಂಬಳಗಿ, ಅನಿತಾ ಪಾಟೀಲ,ನಿರ್ದೇಶಕ ವೀರೇಂದ್ರ ಚೆಡ್ಡಾ, ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇತರರು ಇದ್ದರು.
ಆಡಳಿತ ಮಂಡಳಿ ನಿರ್ದೇಶಕ ಮಹೇಂದ್ರ ಸಿಂಘಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.