* ಮಾದೇಶ್ ಗುರೂಜೀ ಆಶೀರ್ವಚನ
ವಿಜಯವಾಣಿ ಸುದ್ದಿಜಾಲ ಕಿಕ್ಕೇರಿ
ನವದುರ್ಗೆ ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಹುಣಸೂರು ತಾಲೂಕಿನ ದೇವರೂರಿನ ಮಾನವ ಧರ್ಮಪೀಠದ ಪೀಠಾಧ್ಯಕ್ಷ ಮಾದೇಶ್ ಗುರೂಜೀ ಹೇಳಿದರು.
ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ನವದುರ್ಗೆ ಆರಾಧನೆ, ದುರ್ಗಾ ಹೋಮ ಪೂಜೆಯಲ್ಲಿ ಆಶೀರ್ವಚನ ನೀಡಿ, ನವರಾತ್ರಿಯಲ್ಲಿ ಚಾಮುಂಡೇಶ್ವರಿ ಒಂಬತ್ತು ದಿನಗಳಲ್ಲಿ ವಿವಿಧ ಅವತಾರ ಎತ್ತಿ ದುಷ್ಟಶಕ್ತಿಗಳನ್ನು ಸಂಹರಿಸಿ ಸಕಲ ಜೀವರಾಶಿ ನೆಮ್ಮದಿಯಿಂದ ಇರಲು ಕಾರಣಕರ್ತಳಾಗಿದ್ದಾಳೆ. ಇಂತಹ ಶುಭಘಳಿಗೆಯನ್ನು ದೇವಿ ಆರಾಧನೆ ಮಾಡಿದರೆ ಇಷ್ಟಾರ್ಥ ಲಭಿಸಲಿದೆ ಎಂದರು.
ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಪಂಚಭೂತಗಳು ನೆಲೆಸಿರುವ ಪರಿಸರವನ್ನೇ ದೇವರೆಂದು ಪೂಜಿಸಿ ಆರಾಧಿಸಲಾಗುತ್ತಿದೆ. ಪ್ರಕೃತಿ ಮಾತೆ ದೇವಿಯಾಗಿ, ಮೌಢ್ಯವನ್ನು ದೂರಸರಿಸಿ ಧಾರ್ಮಿಕ ಜಾಗೃತಿಯನ್ನು ಭಕ್ತರಿಗೆ ಮೂಡಿಸುತ್ತಿದೆ. ಅಮಾವಾಸ್ಯೆ ಎನ್ನುವ ಕತ್ತಲನ್ನು ಪ್ರಪಂಚದಿಂದ ದೂರಸರಿಸಿ ಪೌರ್ಣಿಮೆಯ ಬೆಳದಿಂಗಳು ಮೂಡಲು ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಪಂಚಭೂತೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಮಾತನಾಡಿ, ವಿದ್ಯೆ ಕದಿಯಲಾರದ ಸಂಪತ್ತಾಗಿದೆ. ಜ್ಞಾನದ ಬೆಳಕಿಗೆ ವಿದ್ಯೆ ಇರಲಿ. ಹೊರಪ್ರಪಂಚದ ಅರಿವಿಗಾಗಿ ಹಿರಿಯರು ತಿಳಿಸುವ ಹಿತೋಕ್ತಿ ತಿಳಿದು, ಪರಿಸರ, ಧರ್ಮ ಎಲ್ಲವನ್ನು ಉಳಿಸಲು ಮುಂದಾಗಿ ಎಂದು ಸಾರಿದರು.
ಮಳವಳ್ಳಿ ಬೋಸೇಗೌಡನ ದೊಡ್ಡಿಯ ಶ್ರೀ ಸಿದ್ಧರಾಮೇಶ್ವರ ಪೀಠದ ಸಿದ್ಧರಾಮ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಕುಬೇರ, ಉಪಾಧ್ಯಕ್ಷೆ ರುಕ್ಮಿಣಿ ನಾಗೇಶ್, ಮೊಟ್ಟೆ ಮಂಜು, ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಭಾರತೀಪುರ ಎಳನೀರು ಪುಟ್ಟಣ್ಣ, ಸಿಂಧುಘಟ್ಟ ನಾಗೇಶ್, ಸುನಿಲ್, ಕೆಂಪರಾಜು, ಕುಮಾರ್, ಮಧು, ಕಾಡಮೆಣಸ ಚಂದ್ರು, ಪವಿತ್ರಗೌಡ, ಸುತ್ತಮುತ್ತಲ ಗ್ರಾಮದ ಭಕ್ತರು ಇದ್ದರು.
==========