ಜಿಲ್ಲೆ

ನಿವೃತ್ತ ಮುಖ್ಯಶಿಕ್ಷಕ ಲಾಲ್‌ಕುಮಾರ್‌ಗೆ ಬೀಳ್ಕೊಡುಗೆ

ನಾಪೋಕ್ಲು: ವಿರಾಜಪೇಟೆ ಚಿಕ್ಕಪೇಟೆಯಲ್ಲಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಬಿ.ಎಸ್.ಲಾಲ್‌ಕುಮಾರ್ ಅವರು 30 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರನ್ನು ಶಾಲೆ ಹಾಗೂ ಶಾಲಾ ಆಡಳಿತ ಮಂಡಳಿ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಬೀಳ್ಕೊಟ್ಟು ಗೌರವಿಸಲಾಯಿತು.


ಜಯಪ್ರಕಾಶ್ ನಾರಾಯಣ ಪ್ರೌಢಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ತ್ರಿಶೂಗಣಪತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಾಲ್‌ಕುಮಾರ್ ಅವರು ಮುಖ್ಯಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಉತ್ತಮ ಪ್ರೀತಿ, ವಾತ್ಸಲ್ಯದಿಂದ ಕಾಣುತ್ತ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಪ್ರೋತ್ಸಹಿಸುತ್ತಿದ್ದರು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ಲಾಲ್‌ಕುಮಾರ್ ಅವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಈ ಅನುದಾನಿತ ಶಾಲೆಗೆ 2021-22ರಲ್ಲಿ ಸ್ವಚ್ಛ ವಿದ್ಯಾಲಯ ಎಂಬ ಪುರಸ್ಕಾರ ದೊರಕಿತ್ತು ಎಂದು ಸ್ಮರಿಸಿದರು.


ನಿವೃತ್ತ ಮುಖ್ಯಶಿಕ್ಷಕ ಬಿ.ಎಸ್.ಲಾಲ್‌ಕುಮಾರ್ ಹಾಗೂ ಪತ್ನಿ ಗೀತಾ ಲಾಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.


ಲಾಲ್‌ಕುಮಾರ್ ಮಾತನಾಡಿ, ಸಾಗಿಬಂದ ಶಿಕ್ಷಕ ವೃತ್ತಿಯ ಹಾದಿಯನ್ನು ಮೆಲುಕು ಹಾಕಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಎಂ.ಉತ್ತಪ್ಪ, ಆಶಾ ಸುಬ್ಬಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಸಂಪನ್ಮೂಲ ವ್ಯೆಕ್ತಿ ಕೆ.ಸಿ.ಗೀತಾಂಜಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಹಳೇ ವಿದ್ಯಾರ್ಥಿ ನೀತು, ಮಾತನಾಡಿದರು.


ಮುಖ್ಯಶಿಕ್ಷಕ ರಾಜೇಗೌಡ, ಶಿಕ್ಷಕಿ ಕವಿತಾ, ನಂದೀಶ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.