ಚಡಚಣ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ ನಾಕಿಮಂದಿ ಓಣಿಯ ಚೈತ್ರಾ ಮಲ್ಲಿಕಾರ್ಜುನ ನಾವಿ (23) ಆತ್ಮಹತ್ಯೆಗೆ ಶರಣಾದ ಮಹಿಳೆ. 6 ತಿಂಗಳ ಹಿಂದೆ ಪಟ್ಟಣದ ನಿವಾಸಿ ಮಲ್ಲಿಕಾರ್ಜುನ ಜೊತೆ ವಿವಾಹವಾಗಿತ್ತು. ಆರಂಭದಿಂದಲೂ ಚೈತ್ರಾಳ ಪತಿ ಮಲ್ಲಿಕಾರ್ಜುನ ನಾವಿ, ಮಾವ ಶಿವಪ್ಪ ನಾವಿ ಹಾಗೂ ಅತ್ತೆ ಅಂಬವ್ವ ನಾವಿ ಮೂವರು ಸೇರಿ ವರದಕ್ಷಿಣೆ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು.
ಗಂಡನ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚೈತ್ರಾಳ ತಂದೆ ಅಶೋಕ ಹಡಪದ ನೀಡಿದ ದೂರಿನ ಮೇರೆಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಡಚಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.